ಡೆನ್ಮಾರ್ಕ್, ಫ್ರೆಂಚ್ ಓಪನ್ ನಿಂದ ಹಿಂದೆ ಸರಿದ ಪ್ರಣಯ್
Photo: twitter/SportsgramIndia
ಡೆನ್ಮಾರ್ಕ್, ಫ್ರೆಂಚ್ ಓಪನ್ ನಿಂದ ಹಿಂದೆ ಸರಿದ ಪ್ರಣಯ್ (ವಾ)
ಹೊಸದಿಲ್ಲಿ : ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಎಚ್.ಎಸ್. ಪ್ರಣಯ್ ಇತ್ತೀಚೆಗೆ ಕೊನೆಗೊಂಡ ಏಶ್ಯನ್ ಗೇಮ್ಸ್ ವೇಳೆ ಕಾಣಿಸಿಕೊಂಡ ಬೆನ್ನುನೋವಿನ ಸಮಸ್ಯೆಯಿಂದಾಗಿ ಡೆನ್ಮಾರ್ಕ್ ಓಪನ್ ಸೂಪರ್-750 ಟೂರ್ನಮೆಂಟ್ ನಿಂದ ಹೊರಗುಳಿದಿದ್ದಾರೆ.
31ರ ಹರೆಯದ ಪ್ರಣಯ್ ಹಾಂಗ್ಝೌನಲ್ಲಿ ಪುರುಷರ ಸಿಂಗಲ್ಸ್ ನಲ್ಲಿ ಕಂಚಿನ ಪದಕವನ್ನು ಜಯಿಸುವ ಮೂಲಕ 41 ವರ್ಷಗಳ ನಂತರ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದರು.
ಇದೀಗ ಗಾಯದ ಸಮಸ್ಯೆಯ ಕಾರಣಕ್ಕೆ ಎರಡರಿಂದ ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ.
ಈ ವಾರ ಯಾವುದೇ ಟೂರ್ನಮೆಂಟ್ ಆಡುವ ಇರಾದೆ ಇಲ್ಲ. ಎಂಆರ್ಐ ಸ್ಕ್ಯಾನಿಂಗ್ ನಲ್ಲಿ ಏನೋ ವರದಿ ಬಂದಿದೆ. ಹೀಗಾಗಿ ನಾನು 2ರಿಂದ 3ರ ವಾರಗಳ ಕಾಲ ಸಕ್ರಿಯ ಕ್ರೀಡೆಯಿಂದ ದೂರ ಉಳಿಯುವೆ. ಹೀಗಾಗಿ ಡೆನ್ಮಾರ್ಕ್ ಹಾಗೂ ಫ್ರಾನ್ಸ್ ನಲ್ಲಿ ನಡೆಯುವ ಟೂರ್ನಿಗಳಲ್ಲಿ ಆಡುವುದಿಲ್ಲ ಎಂದು ಪ್ರಣಯ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಪ್ರಣಯ್ ಅನುಪಸ್ಥಿತಿಯಲ್ಲಿ ಲಕ್ಷ್ಯ ಸೇನ್ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಲಕ್ಷ್ಯ ಸೇನ್ ಏಶ್ಯನ್ ಗೇಮ್ಸ್ ನಲ್ಲಿ ಪುರುಷರ ತಂಡವು ಮೊತ್ತ ಮೊದಲ ಬಾರಿ ಬೆಳ್ಳಿ ಪದಕ ಗೆಲ್ಲಲು ನೆರವಾದ ನಂತರ ಬ್ಯಾಡ್ಮಿಂಟನ್ ಅಂಗಳಕ್ಕೆ ವಾಪಸಾಗುತ್ತಿದ್ದಾರೆ.
ವಿಶ್ವದ ನಂ.15ನೇ ಆಟಗಾರ ಸೇನ್ ಏಶ್ಯನ್ ಗೇಮ್ಸ್ ನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದ್ದರು.
ಕಳೆದ ವಾರ ಅರ್ಕ್ಟಿಕ್ ಓಪನ್ ನಲ್ಲಿ ಸೆಮಿ ಫೈನಲ್ ಗೆ ತಲುಪಿದ ನಂತರ ಎರಡು ಬಾರಿಯ ಒಲಿಂಪಿಯನ್ ಪಿ.ವಿ. ಸಿಂಧು ಉತ್ತಮ ಪ್ರದರ್ಶನದ ವಿಶ್ವಾಸ ಮೂಡಿಸಿದ್ದು, ಸ್ಕಾಟ್ಲೆಂಡ್ ನ ಕಿರ್ಸ್ಟಿ ಗ್ಲೈಮೋರ್ ರನ್ನು ಎದುರಿಸಲಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಅರ್ಹತೆ ಪಡೆಯಲು ರ್ಯಾಂಕಿಂಗ್ ಪಾಯಿಂಟ್ಸ್ ಪಡೆಯಲು ಎದುರು ನೋಡುತ್ತಿರುವ ವಿಶ್ವದ ನಂ.20ನೇ ಆಟಗಾರ ಕಿಡಂಬಿ ಶ್ರೀಕಾಂತ್ ತನ್ನ ಮೊದಲ ಪಂದ್ಯದಲ್ಲಿ ಚೀನಾದ ವೆಂಗ್ ಹಾಂಗ್ಯಾಂಗ್ ರನ್ನು ಎದುರಿಸಲಿದ್ದಾರೆ.