ಪ್ರಸಿದ್ಧ್ ಕೃಷ್ಣ ಮಾರಕ ದಾಳಿ: ಕುತೂಹಲದ ಘಟ್ಟಕ್ಕೆ ಸಿಡ್ನಿ ಟೆಸ್ಟ್
PC: x.com/BCCI
ಸಿಡ್ನಿ: ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರ ಮೊನಚಿನ ದಾಳಿಗೆ ನಲುಗಿದ ಆಸ್ಟ್ರೇಲಿಯಾ ತಂಡ ಸಿಡ್ನಿ ಟೆಸ್ಟ್ ನ ಮೂರನೇ ದಿನವಾದ ಭಾನುವಾರ ಭೋಜನ ವಿರಾಮದ ವೇಳೆಗೆ 3 ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ. ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಕೊನೆಯ ಟೆಸ್ಟ್ ಗೆಲ್ಲಲು ಆಸ್ಟ್ರೇಲಿಯಾ ತಂಡಕ್ಕೆ 91 ರನ್ ಗಳ ಅಗತ್ಯವಿದೆ.
ಎರಡನೇ ದಿನದ ಅಂತ್ಯದಲ್ಲಿ 6 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿದ್ದ ಭಾರತ ಸ್ಕಾಟ್ ಬೊಲಾಂಡ್ ಅವರ ಮಾರಕ ದಾಳಿಗೆ ತತ್ತರಿಸಿ, ಕೇವಲ 16 ರನ್ ಸೇರಿಸುವಷ್ಟರಲ್ಲಿ ಸರ್ವಪತನ ಕಂಡಿತು. ಬೊಲಾಂಡ್ 45 ರನ್ ಗಳಿಗೆ 6 ವಿಕೆಟ್ ಗಳಿಸುವ ಮೂಲಕ ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದರು. ಪ್ಯಾಟ್ ಕಮಿನ್ಸ್ 44 ರನ್ ಗಳಿಗೆ 3 ವಿಕೆಟ್ ಕಿತ್ತರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದ ರಿಷಬ್ ಪಂತ್ 61 ರನ್ ಗಳೊಂದಿಗೆ ಅತ್ಯಧಿಕ ಸ್ಕೋರರ್ ಎನಿಸಿದರು.
ಗಾಯದ ಸಮಸ್ಯೆಯಿಂದ ಕೇವಲ ಒಂದು ಓವರ್ ಬೌಲಿಂಗ್ ನಡೆಸಿದ ಬಳಿಕ ಜಸ್ಪ್ರೀತ್ ಬೂಮ್ರಾ ಫೀಲ್ಡ್ ನಿಂದ ಹೊರ ನಡೆದರು. ಈ ಹಂತದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಪ್ರಸಿದ್ಧ್ ಕೃಷ್ಣ ಅವರು ಆರಂಭಿಕ ಆಟಗಾರ ಸ್ಯಾಮ್ ಕೊನ್ಸ್ಟಾಸ್ (22), ಮರ್ನೂಸ್ ಲೆಂಬುಶೆನ್ (6) ಮತ್ತು ಸ್ಟೀವನ್ ಸ್ಮಿತ್ (4) ಅವರ ವಿಕೆಟ್ ಕೀಳುವ ಮೂಲಕ ಅತಿಥೇಯ ತಂಡಕ್ಕೆ ಆಘಾತ ನೀಡಿದರು. ಸರಣಿ ವೈಫಲ್ಯ ಕಂಡಿರುವ ಉಸ್ಮಾನ್ ಖ್ವಾಜಾ (ನಾಟೌಟ್ 19) ಮತ್ತು ಮೊದಲ ಮೂರು ಟೆಸ್ಟ್ ಗಳಲ್ಲಿ ಅಬ್ಬರಿಸಿದ್ದ ಟ್ರಾವಿಸ್ ಹೆಡ್ (5) ವಿಕೆಟ್ ಕಾಯ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾ ಈ ಸರಣಿಯಲ್ಲಿ 2-1 ಮುನ್ನಡೆಯಲ್ಲಿದ್ದು, ಈ ಪಂದ್ಯದಲ್ಲಿ ಗೆಲುವು ಸಾಧಿಸಿದಲ್ಲಿ 2014-15ರ ಬಳಿಕ ಮೊದಲ ಬಾರಿಗೆ ಟ್ರೋಫಿ ಗೆಲ್ಲಲಿದೆ. ಇಲ್ಲಿ ಗೆಲುವು ಸಾಧಿಸಿದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸುವ ಅವಕಾಶವನ್ನು ಆಸ್ಟ್ರೇಲಿಯಾ ಪಡೆಯಲಿದೆ.