ನಾಳೆಯಿಂದ ಪ್ರೊ ಕಬಡ್ಡಿ ಲೀಗ್ ಆರಂಭ
PC : X \ @ProKabaddi
ಹೊಸದಿಲ್ಲಿ: ಬಹು ನಿರೀಕ್ಷಿತ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ಗೆ(ಪಿಕೆಎಲ್)ಶುಕ್ರವಾರದಂದು ಹೈದರಾಬಾದ್ನಲ್ಲಿ ತೆಲುಗು ಟೈಟಾನ್ಸ್ ಹಾಗೂ ಬೆಂಗಳೂರು ಬುಲ್ಸ್ ನಡುವಿನ ಹೈಪ್ರೊಫೈಲ್ ಪಂದ್ಯದ ಮೂಲಕ ಚಾಲನೆ ಸಿಗಲಿದೆ.
ಮೊದಲ ಪಂದ್ಯದ ಮುನ್ನಾದಿನವಾದ ಗುರುವಾರ ಹೈದರಾಬಾದ್ನ ಬಂಜಾರ ಹಿಲ್ಸ್ನಲ್ಲಿ ಹೊಸ ಪಿಕೆಎಲ್ ಋತುವನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಈ ವೇಳೆ ಕಬಡ್ಡಿ ಲೀಗ್ನ ಆಯುಕ್ತ ಅನುಪಮ್ ಗೋಸ್ವಾಮಿ ಜೊತೆಗೆ ತಂಡದ ನಾಯಕರಾದ ಪವನ್ ಸೆಹ್ರಾವತ್(ತೆಲುಗು ಟೈಟಾನ್ಸ್) ಹಾಗೂ ಪರ್ದೀಪ್ ನರ್ವಾಲ್(ಬೆಂಗಳೂರು ಬುಲ್ಸ್)ಉಪಸ್ಥಿತರಿದ್ದರು. ಉಳಿದ 10 ತಂಡಗಳ ನಾಯಕರು ಸಂಭ್ರಮದಲ್ಲಿ ಭಾಗಿಯಾದರು.
ಈ ಬಾರಿ ಸಾಂಪ್ರದಾಯಿಕ 12 ನಗರಗಳ ಬದಲಿಗೆ ಮೂರು ನಗರಗಳಲ್ಲಿ ಲೀಗ್ ನಡೆಯಲಿದ್ದು, ಇದು ಸ್ಪರ್ಧಾವಳಿಗೆ ಹೊಸ ಆಯಾಮ ನೀಡುವ ಸಾಧ್ಯತೆಯಿದೆ.
ಹಾಲಿ ಚಾಂಪಿಯನ್ ಪುಣೇರಿ ಪಲ್ಟನ್ ತಂಡ ಕಳೆದ ಬಾರಿ ಮಿಂಚಿದ್ದ ಅಸ್ಲಾಂ ಇನಾಂದಾರ್ ಸಹಿತ ಬಹುತೇಕ ಆಟಗಾರರನ್ನು ಉಳಿಸಿಕೊಂಡಿದೆ. ತಮಿಳ್ ತಲೈವಾಸ್ 2.15 ಕೋ.ರೂ. ನೀಡಿ ಸಚಿನ್ ತನ್ವರ್ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ.
ಪ್ರಸಕ್ತ ಲೀಗ್ನಲ್ಲಿ ಬೆಂಗಳೂರು ಬುಲ್ಸ್, ಹರ್ಯಾಣ ಸ್ಟೀಲರ್ಸ್, ಬಂಗಾಳ ವಾರಿಯರ್ಸ್, ದಬಾಂಗ್ ಡೆಲ್ಲಿ, ಗುಜರಾತ್ ಜಯಂಟ್ಸ್, ಜೈಪುರ ಪಿಂಕ್ ಪ್ಯಾಂಥರ್ಸ್, ಪಾಟ್ನಾ ಪೈರೇಟ್ಸ್, ಪುಣೇರಿ ಪಲ್ಟನ್, ತಮಿಳ್ ತಲೈವಾಸ್, ತೆಲುಗು ಟೈಟಾನ್ಸ್, ಯು ಮುಂಬಾ ಹಾಗೂ ಯುಪಿ ಯೋಧಾಸ್ ತಂಡಗಳು ಭಾಗವಹಿಸಲಿವೆ.