ಆದಷ್ಟು ಬೇಗನೆ ಕುಸ್ತಿ ಚಟುವಟಿಕೆಗಳನ್ನು ಮರು ಆರಂಭಿಸಿ: ಕೇಂದ್ರ ಸರಕಾರಕ್ಕೆ ಪುನಿಯಾ ಒತ್ತಾಯ
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಕೇವಲ ಏಳು ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ದೇಶದಲ್ಲಿ ಕುಸ್ತಿ ಚಟುವಟಿಕೆಗಳನ್ನು ಪುನರಾರಂಭಿಸುವ ಅಗತ್ಯವಿದೆ ಎಂದು ಒಲಿಂಪಿಕ್ಸ್ ನಲ್ಲಿ ಪದಕ ವಿಜೇತ ಬಜರಂಗ್ ಪುನಿಯಾ ಶನಿವಾರ ಕ್ರೀಡಾ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಬರೆದುಕೊಂಡಿರುವ ಪುನಿಯಾ, ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಒಲಿಂಪಿಕ್ಸ್ ಅನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತೆ ಕಂಡುಬರುತ್ತಿಲ್ಲ. ಹಿಂದಿನ ನಾಲ್ಕು ಒಲಿಂಪಿಕ್ಸ್ ನಲ್ಲಿ ಕುಸ್ತಿಪಟುಗಳು ಸತತ ನಾಲ್ಕು ಪದಕಗಳನ್ನು ಜಯಿಸಿದ್ದಾರೆ. ಫೆಡರೇಶನ್ ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಪ್ರತಿಭಟನೆಗೆ ಇಳಿದಿದ್ದರಿಂದ ಕಳೆದ ಹಲವು ತಿಂಗಳುಗಳಿಂದ ಕುಸ್ತಿ ಚಟುವಟಿಕೆಗಳು ನಿಂತು ಹೋಗಿವೆ. ಅದಾದ ನಂತರ ನಿಯಮ ಉಲ್ಲಂಘನೆ ಕಾರಣ ನೀಡಿ ಚುನಾಯಿತ ಕುಸ್ತಿ ಫೆಡರೇಶನ್ ನ ಹೊಸ ಆಡಳಿತ ಸಮಿತಿಯನ್ನು ಸಚಿವಾಲಯವು ಅಮಾನತುಗೊಳಿಸಿದೆ. ಒಲಿಂಪಿಕ್ಸ್ ತಯಾರಿಯ ಕುರಿತು ತುರ್ತಾಗಿ ಗಮನ ಹರಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಕುಸ್ತಿಪಟುಗಳ ಭವಿಷ್ಯಕ್ಕಾಗಿ ಎಲ್ಲ ಕುಸ್ತಿ ಚಟುವಟಿಕೆಗಳನ್ನು ಆದಷ್ಟು ಬೇಗನೆ ಆರಂಭಿಸುವಂತೆ ಕ್ರೀಡಾ ಸಚಿವಾಲಯವನ್ನು ವಿನಂತಿಸುತ್ತೇನೆ. ಅಧಿಕಾರಿಗಳು ಆಟಗಾರರ ಭವಿಷ್ಯವನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕು ಎಂದು ಟೋಕಿಯೊ ಒಲಿಂಪಿಕ್ಸ್ ನಲ್ಲಿ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದ ಪುನಿಯಾ ಹೇಳಿದ್ದಾರೆ.
ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಕುಸ್ತಿ ಫೆಡರೇಶನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದನ್ನು ಪ್ರತಿಭಟಿಸಿ ಪುನಿಯಾ ಪದ್ಮ ಶ್ರೀ ಪ್ರಶಸ್ತಿಯನ್ನು ಮರಳಿಸಲು ನಿರ್ಧರಿಸಿದ್ದಾರೆ.