ಸಿಎಸ್ ಕೆ ವಿರುದ್ಧ ಅತ್ಯಧಿಕ ಸತತ ಗೆಲುವು ದಾಖಲಿಸಿ ಇತಿಹಾಸ ಸೃಷ್ಟಿಸಿದ ಪಂಜಾಬ್
Photo: X/mufaddal_vohra
ಹೊಸದಿಲ್ಲಿ: ಬುಧವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅನಾಯಾಸವಾಗಿ ಏಳು ವಿಕೆಟ್ ಗಳ ಜಯ ಸಾಧಿಸಿದ ಪಂಜಾಬ್ ಕಿಂಗ್ಸ್ ತಂಡ, ಐಪಿಎಲ್ ಇತಿಹಾಸದಲ್ಲಿ ಸಿಎಸ್ ಕೆ ವಿರುದ್ಧ ಗರಿಷ್ಠ ಸತತ ಗೆಲುವು ದಾಖಲಿಸಿದ ಎರಡನೇ ತಂಡವಾಗಿ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆಯಿತು.
ಜಾಬಿ ಬ್ರಿಸ್ಟೊ ಮತ್ತು ರಿಲೀ ರೋಸೊ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್, ಹಾಲಿ ಚಾಂಪಿಯನ್ ತಂಡವನ್ನು ಸುಲಭವಾಗಿ ಸೋಲಿಸಿತು. 163 ರನ್ ಗಳನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪರ ಬ್ರಿಸ್ಟೊ 46 ಹಾಗೂ ರೋಸೊ 43 ರನ್ ಗಳನ್ನು ಸಿಡಿಸಿ ಇನ್ನೂ 13 ಎಸೆತಗಳು ಇರುವಂತೆಯೇ ತವರು ನೆಲದಲ್ಲಿ ಅತಿಥೇಯರಿಗೆ ಸೋಲುಣಿಸಿತು.
2021 ರಿಂದ 2024ರ ನಡುವೆ ಪಂಜಾಬ್ ಕಿಂಗ್ಸ್ ಚೆನ್ನೈ ವಿರುದ್ಧ ಐದು ಗೆಲುವುಗಳನ್ನು ದಾಖಲಿಸಿದಂತಾಗಿದೆ. 2018 ಮತ್ತು 2019ರಲ್ಲಿ ಮುಂಬೈ ಇಂಡಿಯನ್ಸ್ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿತ್ತು. ಡೆಲ್ಲಿ ಕ್ಯಾಪಿಟಲ್ಸ್ 2020 ಮತ್ತು 2021ರಲ್ಲಿ ನಾಲ್ಕು ಸತತ ಗೆಲುವುಗಳನ್ನು ಸಿಎಸ್ ಕೆ ವಿರುದ್ಧ ದಾಖಲಿಸಿದ್ದು, ರಾಜಸ್ಥಾನ ರಾಯಲ್ಸ್ ಕೂಡಾ 2021 ಮತ್ತು 2023ರ ನಡುವೆ ಈ ಸಾಧನೆ ಮಾಡಿದೆ.
ಪಂಜಾಬ್ ಕಿಂಗ್ಸ್, ಸಿಎಸ್ ಕೆ ವಿರುದ್ಧ ಕಳೆದ ಐದು ಐಪಿಎಲ್ ಪಂದ್ಯಗಳನ್ನು ಸತತವಾಗಿ ಗೆದ್ದಿದ್ದು, ಕೊನೆಯ ಪಂದ್ಯವನ್ನು 7 ವಿಕೆಟ್ ಅಂತರದಿಂದ ಅದಕ್ಕೂ ಮೊದಲಿನ ನಾಲ್ಕು ಪಂದ್ಯಗಳನ್ನು ಕ್ರಮವಾಗಿ 4 ವಿಕೆಟ್, 11 ರನ್, 54 ರನ್ ಮತ್ತು 6 ವಿಕೆಟ್ಗಳಿಂದ ಗೆದ್ದಿತ್ತು.