ಖತರ್ ಓಪನ್: ರುಬ್ಲೆವ್ ಗೆ ಸೋಲುಣಿಸಿ ಹದಿಹರಯದ ಜಾಕೂಬ್ ಸೆಮಿಫೈನಲ್ ಗೆ
ಜಾಕೂಬ್ ಮೆನ್ಸಿಕ್ | Photo: NDTV
ದೋಹಾ : ಖತರ್ ಓಪನ್ ಪಂದ್ಯಾವಳಿಯಲ್ಲಿ, ಗುರುವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಝೆಕ್ ನ ಹದಿಹರೆಯದ ಆಟಗಾರ ಜಾಕೂಬ್ ಮೆನ್ಸಿಕ್ ಅಗ್ರ ಶ್ರೇಯಾಂಕದ ಆ್ಯಂಡ್ರಿ ರುಬ್ಲೆವ್ ಗೆ ನೇರ ಸೆಟ್ ಗಳಲ್ಲಿ ಸೋಲುಣಿಸಿ ತನ್ನ ಮೊದಲ ಎಟಿಪಿ ಸೆಮಿಫೈನಲ್ ತಲುಪಿದ್ದಾರೆ. ಅದರೊಂದಿಗೆ, ಜಾಗತಿಕ ಅಗ್ರ 100 ಟೆನಿಸ್ ಆಟಗಾರರ ಪಟ್ಟಿಗೆ ಮೊದಲ ಬಾರಿಗೆ ಸೇರ್ಪಡೆಗೊಳ್ಳಲಿದ್ದಾರೆ.
ಹದಿನೆಂಟು ವರ್ಷದ ಮೆನ್ಸಿಕ್ ಐದನೇ ವಿಶ್ವ ರ್ಯಾಂಕಿಂಗ್ ನ ರುಬ್ಲೆವ್ ರನ್ನು 6-4, 7-6 (8/6) ಸೆಟ್ ಗಳಿಂದ ಸೋಲಿಸಿದರು.
ಇದಕ್ಕೂ ಒಂದು ದಿನ ಮೊದಲು ಅವರು ಮೂರು ಬಾರಿಯ ಗ್ರ್ಯಾನ್ ಸ್ಲಾಮ್ ವಿಜೇತ ಆ್ಯಂಡಿ ಮರ್ರೆಯನ್ನು ಸೋಲಿಸಿದ್ದರು.
“ಇದೊಂದು ಅಮೋಘ ವಾರವಾಗಿದೆ. ಆರಂಭದಿಂದಲೂ ನಾನು ಚೆನ್ನಾಗಿ ಆಡಿದೆ. ದೊಡ್ಡ ಆಟಗಾರರ ವಿರುದ್ಧವೂ ಚೆನ್ನಾಗಿ ಆಡಬಲ್ಲೆ ಎಂದು ನನಗೆ ಗೊತ್ತಿತ್ತು. ಆ ಶ್ರೇಷ್ಠ ಆಟಗಾರರನ್ನು ಸೋಲಿಸಿ ಸೆಮಿಫೈನಲ್ ತಲುಪಿರುವುದು ಅತ್ಯುತ್ತಮ ಅನುಭವವಾಗಿದೆ'' ಎಂದು ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿರುವ ಮೆನ್ಸಿಕ್ ಹೇಳಿದರು. ಅವರು 116 ವಿಶ್ವ ರ್ಯಾಂಕಿಂಗ್ನೊಂದಿಗೆ ದೋಹಾಕ್ಕೆ ಬಂದಿದ್ದರು.
“ಆದರೆ ನನ್ನ ಕೆಲಸ ಇನ್ನೂ ಮುಗಿದಿಲ್ಲ. ಸೆಮಿಫೈನಲ್ನಲ್ಲೂ ನಾನು ಇದೇ ರೀತಿ ಆಡಬಲ್ಲೆ ಹಾಗೂ ಫೈನಲ್ ತಲುಪಬಲ್ಲೆ ಎಂದು ನನಗನಿಸುತ್ತಿದೆ'' ಎಂದರು.
ಅವರು ಗುರುವಾರ ರುಬ್ಲೆವ್ರನ್ನು ಒಂದು ಗಂಟೆ ಮತ್ತು 38 ನಿಮಿಷಗಳಲ್ಲಿ ಸೋಲಿಸಿದರು. 2021ರ ಯುಎಸ್ ಓಪನ್ನಲ್ಲಿ ಕಾರ್ಲೋಸ್ ಅಲ್ಕಾರಝ್, ಸ್ಟೆಫನೊಸ್ ಟ್ಸಿಟ್ಸಿಪಸ್ರನ್ನು ಸೋಲಿಸಿದ ಬಳಿಕ, ಅಗ್ರ 5ರಲ್ಲಿ ರ್ಯಾಂಕಿಂಗ್ ಹೊಂದಿರುವ ಆಟಗಾರನೋರ್ವನನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರ ಮೆನ್ಸಿಕ್ ಆಗಿದ್ದಾರೆ.
ಅವರು ಸೆಮಿಫೈನಲ್ನಲ್ಲಿ 2018ರ ಚಾಂಪಿಯನ್ ಗೇಲ್ ಮೊನ್ಫಿಸ್ರನ್ನು ಎದುರಿಸಲಿದ್ದಾರೆ. ಫ್ರಾನ್ಸ್ನ ಮೊನ್ಫಿಸ್ ಇನ್ನೊಂದು ಕ್ವಾರ್ಟರ್ ಫೈನಲ್ನಲ್ಲಿ ತನ್ನದೇ ದೇಶದ ಉಗೊ ಹಂಬರ್ಟ್ರನ್ನು 6-2, 6-4 ಸೆಟ್ಗಳಿಂದ ಸೋಲಿಸಿದರು.
ಇನ್ನೊಂದು ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯದ ಅಲೆಕ್ಸೀ ಪೋಪಿರಿನ್ ಮತ್ತು ರಶ್ಯದ ಕರೇನ್ ಖಚನೊವ್ ಮುಖಾಮುಖಿಯಾಗಲಿದ್ದಾರೆ.