ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಈಡೇರಿಸಿಕೊಳ್ಳಲು ಆರ್ ಸಿ ಬಿ ತೊರೆಯಿರಿ : ಕೊಹ್ಲಿಗೆ ಪೀಟರ್ಸನ್ ಸಲಹೆ
ವಿರಾಟ್ ಕೊಹ್ಲಿ | PC : PTI
ಹೊಸದಿಲ್ಲಿ: ರಾಜಸ್ಥಾನ ರಾಯಲ್ಸ್ ವಿರುದ್ಧ ಬುಧವಾರ ನಡೆದ ಎಲಿಮಿನೇಟರ್ ಪಂದ್ಯದಲ್ಲಿ 4 ವಿಕೆಟ್ ಗಳ ಅಂತರದಿಂದ ಸೋಲನುಭವಿಸಿ ಪ್ರಸಕ್ತ ಐಪಿಎಲ್ ಟೂರ್ನಿಯಿಂದ ಹೊರ ನಡೆದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಮತ್ತೊಮ್ಮೆ ಭಾರೀ ನಿರಾಶೆ ಅನುಭವಿಸಿದರು.
ಕೊಹ್ಲಿ ಅವರ ಸ್ಥಿರ ಪ್ರದರ್ಶನ ಹಾಗೂ ಭಾರೀ ಪ್ರಯತ್ನಗಳ ಹೊರತಾಗಿಯೂ ಆರ್ ಸಿ ಬಿ ತಂಡ ಐಪಿಎಲ್ ಪ್ರಶಸ್ತಿ ಗೆಲ್ಲುವ ಕನಸು ಈಡೇರಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕೊಹ್ಲಿಗೆ ಮತ್ತೊಂದು ಫ್ರಾಂಚೈಸಿಗೆ ತೆರಳಿ ಐಪಿಎಲ್ ಟ್ರೋಫಿ ಗೆಲ್ಲುವ ತನ್ನ ಕನಸನ್ನು ಈಡೇರಿಸಿಕೊಳ್ಳಲು ಬಹುಶಃ ಇದು ಸರಿಯಾದ ಸಮಯ ಎಂದು ರಾಜಸ್ಥಾನ ವಿರುದ್ಧ ಪಂದ್ಯದ ನಂತರ ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಸಲಹೆ ನೀಡಿದ್ದಾರೆ.
ವಿವಿಧ ಕ್ರೀಡೆಗಳಲ್ಲಿರುವ ಶ್ರೇಷ್ಠ ಕ್ರೀಡಾಪಟುಗಳು ತಮ್ಮ ಗುರಿಯನ್ನು ಸಾಧಿಸಲು ತಂಡಗಳನ್ನು ಬದಲಾಯಿಸುತ್ತಾರೆ. ಕೊಹ್ಲಿಗೆ ತಂಡ ಬದಲಿಸುವ ಅಗತ್ಯ ಇದೆ ಎಂದರು.
ನಾನು ಈ ಹಿಂದೆ ಹೇಳಿದ್ದೇನೆ. ಈಗ ಮತ್ತೊಮ್ಮೆ ಹೇಳುತ್ತಿದ್ದೇನೆ. ಇತರ ಕ್ರೀಡೆಗಳ ಶ್ರೇಷ್ಠ ಕ್ರೀಡಾಳುಗಳು ತಂಡಗಳನ್ನು ತ್ಯಜಿಸಿ ತಮ್ಮ ಗುರಿಯನ್ನು ಬೇರೆಲ್ಲೊ ಈಡೇರಿಸಿಕೊಳ್ಳುತ್ತಾರೆ. ಕೊಹ್ಲಿ ಅವರು ತುಂಬಾ ಪ್ರಯತ್ನಪಟ್ಟಿದ್ದಾರೆ. ಮತ್ತೊಮ್ಮೆ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಆದರೆ ಫ್ರಾಂಚೈಸಿ ಮತ್ತೊಮ್ಮೆ ವಿಫಲವಾಗಿದೆ. ಟೀಮ್ನ ಬ್ರ್ಯಾಂಡ್ ಹಾಗೂ ತಂಡಕ್ಕೆ ಅವರು ತಂದಿರುವ ವಾಣಿಜ್ಯ ಮೌಲ್ಯವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ವಿರಾಟ್ ಟ್ರೋಫಿ ಗೆಲ್ಲಲು ಅರ್ಹರಿದ್ದಾರೆ. ತಂಡದೊಂದಿಗೆ ಆಡಿ ಆ ತಂಡ ಟ್ರೋಫಿ ಗೆಲ್ಲಲು ನೆರವಾಗುವ ಅರ್ಹತೆ ಅವರಿಗಿದೆ ಎಂದು ಪೀಟರ್ಸನ್ ಹೇಳಿದ್ದಾರೆ.
ಕೊಹ್ಲಿ ದಿಲ್ಲಿ ಮೂಲದವರು. ಅವರು ಡೆಲ್ಲಿ ಕ್ಯಾಪಿಟಲ್ಸ್ಗೆ ಮತ್ತೆ ಸೇರುವ ಕುರಿತು ಚಿಂತಿಸಬೇಕು. ಕ್ರೀಡಾ ಐಕಾನ್ ಗಳಾದ ಡೇವಿಡ್ ಬೆಕ್ಹ್ಯಾಮ್, ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೊನೆಲ್ ಮೆಸ್ಸಿ ಹಾಗೂ ಹ್ಯಾರಿ ಕೇನ್ ಒಳ್ಳೆಯ ಯಶಸ್ಸು ಕಾಣಲು ತಂಡಗಳನ್ನು ಬದಲಿಸಿದ್ದಾರೆ ಎಂದು ಪೀಟರ್ಸನ್ ಹೇಳಿದರು.