ಇಂಗ್ಲೆಂಡ್ ವಿರುದ್ಧ ಗರಿಷ್ಠ ವಿಕೆಟ್ ಸರದಾರನಾದ ಆರ್.ಅಶ್ವಿನ್

ರವಿಚಂದ್ರನ್ ಅಶ್ವಿನ್ | Photo: PTI
ವಿಶಾಖಪಟ್ಟಣ: ಪಿಚ್ ನಿಂದ ಟರ್ನ್ ಹಾಗೂ ಬೌನ್ಸ್ ಪಡೆಯುವ ಸಾಮರ್ಥ್ಯವನ್ನು ಹೊಂದಿರುವ ರವಿಚಂದ್ರನ್ ಅಶ್ವಿನ್ ವಿಶ್ವದ ಶ್ರೇಷ್ಠ ಸ್ಪಿನ್ ಬೌಲರ್ಗಳಲ್ಲಿ ಒಬ್ಬರಾಗಿದ್ದಾರೆ.
ಅಶ್ವಿನ್ ಪ್ರಮುಖವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಸಾಕಷ್ಟು ಯಶಸ್ಸು ಸಾಧಿಸಿದ್ದು, ತನ್ನ ಚಾಣಾಕ್ಷ ಹಾಗೂ ಕಾರ್ಯತಂತ್ರದ ಬೌಲಿಂಗ್ ಮೂಲಕ ಹೆಸರಾಗಿದ್ದಾರೆ. ಅಶ್ವಿನ್ ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ನ 4ನೇ ದಿನದಾಟದಲ್ಲಿ ಒಲಿ ಪೋಪ್ ವಿಕೆಟನ್ನು ಉರುಳಿಸುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದರು.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಗಳನ್ನು ಕಬಳಿಸಿದ ಅಶ್ವಿನ್ ಭಾರತದ ಮಾಜಿ ಲೆಗ್ ಸ್ಪಿನ್ನರ್ ಭಾಗವತ್ ಚಂದ್ರಶೇಖರ್ ದಾಖಲೆಯನ್ನು ಮುರಿದರು.
ಒಲಿ ಪೋಪ್ ಅಶ್ವಿನ್ ಗೆ ಬಲಿಯಾದ ಇಂಗ್ಲೆಂಡ್ ನ 96ನೇ ಬ್ಯಾಟರ್ ಎನಿಸಿಕೊಂಡರು. ಜೋ ರೂಟ್ ವಿಕೆಟನ್ನು ಉರುಳಿಸಿದ ಅಶ್ವಿನ್ ತನ್ನ ವಿಕೆಟ್ ಸಂಖ್ಯೆಯನ್ನು 97ಕ್ಕೆ ವಿಸ್ತರಿಸಿದರು.
ಕನ್ನಡಿಗ ಚಂದ್ರಶೇಖರ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಇಂಗ್ಲೆಂಡ್ ಎದುರು 95 ವಿಕೆಟ್ ಗಳನ್ನು ಪಡೆದಿದ್ದರು. ಆ ನಂತರ ಅನಿಲ್ ಕುಂಬ್ಳೆ(92 ವಿಕೆಟ್), ಬಿಶನ್ ಸಿಂಗ್ ಬೇಡಿ/ಕಪಿಲ್ ದೇವ್(85 ವಿಕೆಟ್) ಹಾಗೂ ಇಶಾಂತ್ ಶರ್ಮಾ(67 ವಿಕೆಟ್)ಅವರಿದ್ದಾರೆ.