ವಿದೇಶಿ ಟೆಸ್ಟ್ ಪಂದ್ಯಗಳಲ್ಲಿ ಆರ್. ಅಶ್ವಿನ್ ಕಡೆಗಣನೆ: ಸುನೀಲ್ ಗವಾಸ್ಕರ್ ಆಕ್ರೋಶ
ಆರ್. ಅಶ್ವಿನ್ , ಸುನೀಲ್ ಗವಾಸ್ಕರ್ | PTI
ಹೊಸದಿಲ್ಲಿ: ಆರ್.ಅಶ್ವಿನ್ರನ್ನು ಟೀಮ್ ಮ್ಯಾನೇಜ್ಮೆಂಟ್ ನಡೆಸಿಕೊಂಡಿರುವ ರೀತಿಗೆ ತನ್ನ ನಿರಾಶೆಯನ್ನು ವ್ಯಕ್ತಪಡಿಸಿರುವ ಭಾರತೀಯ ಕ್ರಿಕೆಟ್ ದಂತಕತೆ ಸುನೀಲ್ ಗವಾಸ್ಕರ್, ತಂಡದ ಸಮತೋಲನ ಹೆಸರಿನಲ್ಲಿ ಹಿರಿಯ ಸ್ಪಿನ್ನರ್ ನನ್ನು ಮೂಲೆಗುಂಪು ಮಾಡಲಾಗಿದೆ ಎಂದು ಆರೋಪಿಸಿದರು.
ಈಗ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯ ನಡುವಿನ ಸರಣಿಯ ಮೂರನೇ ಟೆಸ್ಟ್ ಪಂದ್ಯದ ನಂತರ ಅಶ್ವಿನ್ ಅವರು ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ಹಠಾತ್ತನೆ ನಿವೃತ್ತಿಯಾದ ನಂತರ ಗವಾಸ್ಕರ್ರಿಂದ ಈ ಟೀಕೆ ವ್ಯಕ್ತವಾಗಿದೆ.
ಪ್ರಸಕ್ತ ಸರಣಿಯಲ್ಲಿ 38ರ ಹರೆಯದ ಅಶ್ವಿನ್ ಅವರು ಮೊದಲ 3 ಟೆಸ್ಟ್ ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಮಾತ್ರ ಆಡಿದ್ದರು. ಸ್ಪಿನ್ನರ್ ಸ್ಥಾನಕ್ಕಾಗಿ ಭಾರತ ತಂಡ ಆವರ್ತನ ನಿಯಮವನ್ನು ಅಳವಡಿಸಿದ್ದು, ಪರ್ತ್ನಲ್ಲಿ ವಾಶಿಂಗ್ಟನ್ ಸುಂದರ್, ಅಡಿಲೇಡ್ನಲ್ಲಿ ಅಶ್ವಿನ್ ಹಾಗೂ ಬ್ರಿಸ್ಬೇನ್ ಟೆಸ್ಟ್ನಲ್ಲಿ ರವೀಂದ್ರ ಜಡೇಜರನ್ನು ಆಡಿಸಿತ್ತು. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯ ದೇಶಗಳಲ್ಲಿ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿ ಅಶ್ವಿನ್ ಖಾಯಂ ಸ್ಥಾನ ಪಡೆದಿದ್ದರೂ ತನ್ನ 14 ವರ್ಷಗಳ ವೃತ್ತಿಬದುಕಿನಲ್ಲಿ ಈ ಎಲ್ಲ ದೇಶಗಳಲ್ಲಿ ಕೇವಲ 26 ಟೆಸ್ಟ್ ಪಂದ್ಯಗಳನ್ನು ಆಡಿದ್ದರು.
ಕ್ರಿಕೆಟ್ ಬ್ಯಾಟರ್ಗಳ ಪಂದ್ಯವಾಗಿದೆ. ಬೌಲರ್ಗಳು ಸರಣಿಶ್ರೇಷ್ಠ ಪ್ರಶಸ್ತಿ ಪಡೆದರೂ ಬ್ಯಾಟರ್ಗಳಿಗೆ ಸಿಗುವ ಗೌರವ ಬೌಲರ್ಗಳಿಗೆ ಸಿಗುವುದಿಲ್ಲ. ತಂಡದ ಸಮತೋಲನದ ಹೆಸರಲ್ಲಿ ಬೌಲರ್ ಅನ್ನು ಆಡುವ 11ರ ಬಳಗದಿಂದ ಹೊರಗಿಡಲಾಗುತ್ತದೆ. ಇದೇ ಮಾನದಂಡ ವಿದೇಶಿ ನೆಲದಲ್ಲಿ ಪರದಾಟ ನಡೆಸುವ ಬ್ಯಾಟರ್ಗಳಿಗೆ ಏಕೆ ಅನ್ವಯವಾಗುವುದಿಲ್ಲ ಎಂದು ʼಮಿಡ್ಡೇʼ ಪತ್ರಿಕೆಗೆ ಬರೆದ ಅಂಕಣ ಬರಹದಲ್ಲಿ ಗವಾಸ್ಕರ್ ಪ್ರಶ್ನಿಸಿದ್ದಾರೆ.