ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್: ಇತಿಹಾಸ ನಿರ್ಮಿಸಿದ ಆರ್. ಅಶ್ವಿನ್
ರವಿಚಂದ್ರನ್ ಅಶ್ವಿನ್ (Photo: PTI)
ರಾಂಚಿ: ಜೆಎಸ್ಸಿಎ ಇಂಟರ್ ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನೂರು ವಿಕೆಟ್ಗಳನ್ನು ಗಳಿಸಿದ ಪ್ರಪ್ರಥಮ ಭಾರತೀಯ ಬೌಲರ್ ಎಂಬ ಹಿರಿಮೆಗೆ ರವಿಚಂದ್ರನ್ ಅಶ್ವಿನ್ ಶುಕ್ರವಾರ ಪಾತ್ರರಾದರು.
ಸಕ್ರಿಯ ಆಟಗಾರರ ಪೈಕಿ ಆಸ್ಟ್ರೇಲಿಯಾದ ನಥಾನ್ ಲಿಯೋನ್ ಮಾತ್ರ ಇಂಗ್ಲೆಂಡ್ ವಿರುದ್ಧ ನೂರು ವಿಕೆಟ್ ಗಳಿಸಿದ ಸಾಧನೆ ಮಾಡಿದ್ದು, ರವಿಚಂದ್ರನ್ ಅಶ್ವಿನ್ ಕೂಡಾ ಈ ಸಾಧನೆ ಮಾಡುವ ಮೂಲಕ ಶ್ರೇಷ್ಠ ಬೌಲರ್ಗಳ ಗುಂಪಿಗೆ ಸೇರ್ಪಡೆಯಾಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಸಾರ್ವಕಾಲಿಕ ಶ್ರೇಷ್ಠ ಸಾಧನೆ ಮಾಡಿರುವ ದಾಖಲೆಯು ಮಾಜಿ ಆಟಗಾರ ಶೇನ್ ವಾರ್ನ್ ಅವರ ಹೆಸರಿನಲ್ಲಿದ್ದು, ಅವರು 72 ಇನಿಂಗ್ಸ್ಗಳ ಪೈಕಿ 195 ವಿಕೆಟ್ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ವಿಕೆಟ್ ಕಿತ್ತ ಸಾಧನೆ ಮಾಡಿರುವ ಭಾರತೀಯ ಬೌಲರ್ಗಳ ಪೈಕಿ ಆರ್.ಅಶ್ವಿನ್ (43 ಇನಿಂಗ್ಸ್ಗಳಲ್ಲಿ 100 ವಿಕೆಟ್) ಹಾಗೂ ಬಿ.ಎಸ್.ಚಂದ್ರಶೇಖರ್ (38 ಇನಿಂಗ್ಸ್ಗಳಲ್ಲಿ 95 ವಿಕೆಟ್) ಮೊದಲೆರಡು ಸ್ಥಾನದಲ್ಲಿದ್ದಾರೆ.