2012ರ ನಂತರ ಭಾರತದಲ್ಲಿ ಟೆಸ್ಟ್ ಶತಕ ಗಳಿಸಿದ ಮೊದಲ ಕಿವೀಸ್ ಬ್ಯಾಟರ್ ರಚಿನ್ ರವೀಂದ್ರ
ರಚಿನ್ ರವೀಂದ್ರ | PTI
ಬೆಂಗಳೂರು: ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಕ್ರಿಕೆಟ್ ತಂಡದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ರಚಿನ್ ರವೀಂದ್ರ 2012ರ ನಂತರ ಶತಕ ಗಳಿಸಿದ ನ್ಯೂಝಿಲ್ಯಾಂಡ್ನ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ರಾಸ್ ಟೇಲರ್ ಈ ಸಾಧನೆ ಮಾಡಿದ ನ್ಯೂಝಿಲ್ಯಾಂಡ್ನ ಕೊನೆಯ ಆಟಗಾರನಾಗಿದ್ದಾರೆ. 2012ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಟೇಲರ್ 127 ಎಸೆತಗಳಲ್ಲಿ 113 ರನ್ ಗಳಿಸಿದ್ದರು.
ರವೀಂದ್ರ 124 ಎಸೆತಗಳಲ್ಲಿ 11 ಬೌಂಡರಿ ಹಾಗೂ ಎರಡು ಸಿಕ್ಸರ್ಗಳ ಸಹಾಯದಿಂದ ಶತಕ ಪೂರೈಸಿದರು. 24ರ ಹರೆಯದ ರವೀಂದ್ರ ಭಾರತ ನೆಲದಲ್ಲಿ ಶತಕ ಸಿಡಿಸಿದ ಕಿವೀಸ್ನ 21ನೇ ಬ್ಯಾಟರ್ ಎನಿಸಿಕೊಂಡರು.
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ದೃತಿಗೆಡದ ರವೀಂದ್ರ ಮಾಜಿ ನಾಯಕ ಟಿಮ್ ಸೌಥಿ ಅವರೊಂದಿಗೆ 8ನೇ ವಿಕೆಟ್ಗೆ ನಿರ್ಣಾಯಕ 137 ರನ್ ಜೊತೆಯಾಟ ನಡೆಸಿದರು. ಇದು ಕಿವೀಸ್ ಇನಿಂಗ್ಸ್ನಲ್ಲಿ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ.
ರವೀಂದ್ರ 2021ರಲ್ಲಿ ಕಾನ್ಪುರದಲ್ಲಿ ಭಾರತ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದರು. 19 ಇನಿಂಗ್ಸ್ಗಳಲ್ಲಿ 2ನೇ ಬಾರಿ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ದಾಖಲಿಸಿದ್ದಾರೆ. ಈ ವರ್ಷಾರಂಭದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ದ ಮೊದಲ ಶತಕ ಗಳಿಸಿದ್ದರು.
ವೆಲ್ಲಿಂಗ್ಟನ್ನಲ್ಲಿ ಜನಿಸಿರುವ ರಚಿನ್ ರವೀಂದ್ರ ಅವರ ತಂದೆ ಬೆಂಗಳೂರಿನವರು. ಈ ಹಿಂದೆ 366 ಎಸೆತಗಳಲ್ಲಿ 240 ರನ್ ಗಳಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ್ದಾರೆ.
ಪ್ರಸಕ್ತ ಟೆಸ್ಟ್ನಲ್ಲಿ ಕುಲದೀಪ್ ಯಾದವ್ಗೆ ವಿಕೆಟ್ ಒಪ್ಪಿಸುವ ಮೊದಲು 157 ಎಸೆತಗಳಲ್ಲಿ 13 ಬೌಂಡರಿ ಹಾಗೂ 4 ಸಿಕ್ಸರ್ಗಳನ್ನು ಒಳಗೊಂಡ 134 ರನ್ ಗಳಿಸಿದ್ದಾರೆ.