ವಿಶ್ವಕಪ್ ನಲ್ಲಿ ಸಚಿನ್ ದಾಖಲೆ ಮುರಿದ ರಚಿನ್
ಕಿವೀಸ್ ಪರ ಒಂದೇ ಋತುವಿನಲ್ಲಿ 3 ಶತಕ ಸಿಡಿಸಿ ದಾಖಲೆ
ರಚಿನ್ ರವೀಂದ್ರ
ಬೆಂಗಳೂರು: ನ್ಯೂಝಿಲ್ಯಾಂಡ್ನ ಹೊಸ ಬ್ಯಾಟಿಂಗ್ ಸ್ಟಾರ್ ರಚಿನ್ ರವೀಂದ್ರ ತನ್ನ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದ್ದು, ಪಾಕಿಸ್ತಾನ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ನಡೆದ ನಿರ್ಣಾಯಕ ಪಂದ್ಯದಲ್ಲಿ ತನ್ನ 3ನೇ ಶತಕ ಬಾರಿಸಿದ್ದಾರೆ.
23 ರ ಹರೆಯದ ರಚಿನ್ 94 ಎಸೆತಗಳಲ್ಲಿ 1 ಸಿಕ್ಸರ್ ಹಾಗೂ 15 ಬೌಂಡರಿಗಳ ಸಹಿತ 108 ರನ್ ಗಳಿಸಿ ತನ್ನ ಬ್ಯಾಟಿಂಗ್ ಪರಾಕ್ರಮ ಪ್ರದರ್ಶಿಸಿದರು.
ಈ ಶತಕದ ಮೂಲಕ ರಚಿನ್ ಅವರು 25ನೇ ವರ್ಷಕ್ಕೆ ಕಾಲಿಡುವ ಮೊದಲೇ ವಿಶ್ವಕಪ್ನಲ್ಲಿ ಅತ್ಯಂತ ಹೆಚ್ಚು ಶತಕ ಸಿಡಿಸಿದ ಆಟಗಾರ ಎನಿಸಿಕೊಂಡು ಇತಿಹಾಸ ಬರೆದಿದ್ದಾರೆ. ಈ ಮೂಲಕ ಲೆಜೆಂಡರಿ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿದಿದ್ದಾರೆ. ತೆಂಡುಲ್ಕರ್ 25ನೇ ಹುಟ್ಟುಹಬ್ಬವನ್ನು ಆಚರಿಸುವ ಮೊದಲು ವಿಶ್ವಕಪ್ ಪಂದ್ಯಗಳಲ್ಲಿ ಎರಡು ಬಾರಿ ಶತಕ ಗಳಿಸಿದ್ದರು. ಭಾರತೀಯ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್ ಹಾಗೂ ಸಚಿನ್ ತೆಂಡುಲ್ಕರ್ ಅವರಿಂದ ಪ್ರೇರಿತವಾಗಿ ರಚಿನ್ ಎಂಬ ಹೆಸರನ್ನು ಇಟ್ಟುಕೊಂಡಿರುವ ರಚಿನ್ ರವೀಂದ್ರ ಭಾರತ ಮೂಲದವರು.
ಈ ಸಾಧನೆಯಲ್ಲದೆ ರಚಿನ್ ಅವರು 25ನೇ ವಸಂತಕ್ಕೆ ಕಾಲಿಡುವ ಮೊದಲು ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಗರಿಷ್ಠ ರನ್ ಗಳಿಸಿದ್ದ ಸಚಿನ್ ದಾಖಲೆ(1996ರಲ್ಲಿ 532 ರನ್)ಯನ್ನು ಸರಿಗಟ್ಟಿದ್ದಾರೆ. ಮುಂದಿನ ಇನಿಂಗ್ಸ್ನಲ್ಲಿ ಸಚಿನ್ ದಾಖಲೆ ಮುರಿಯುವ ಅವಕಾಶ ರಚಿನ್ಗಿದೆ.
ಈ ಅಮೋಘ ಪ್ರದರ್ಶನ ಮೂಲಕ ರಚಿನ್ ಅವರು ಒಂದೇ ವಿಶ್ವಕಪ್ನಲ್ಲಿ ಅತ್ಯಂತ ಹೆಚ್ಚು ಶತಕಗಳನ್ನು ಗಳಿಸಿದ ನ್ಯೂಝಿಲ್ಯಾಂಡ್ ಬ್ಯಾಟರ್ ಆಗಿದ್ದಾರೆ. ಆರು ನ್ಯೂಝಿಲ್ಯಾಂಡ್ ಆಟಗಾರರು ಪ್ರತೀ ವಿಶ್ವಕಪ್ ಟೂರ್ನಮೆಂಟ್ಗಳಲ್ಲಿ ಎರಡು ಶತಕಗಳನ್ನು ಗಳಿಸಿದ್ದರು.
ರಚಿನ್ ತನ್ನ ಇನಿಂಗ್ಸ್ನಲ್ಲಿ ಹಲವು ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್ಸ್ಟೋವ್ ದಾಖಲೆ (11 ಇನಿಂಗ್ಸ್, 532 ರನ್)ಮುರಿಯಲು ರಚಿನ್ಗೆ ಕೇವಲ 9 ರನ್ ಅಗತ್ಯವಿದೆ. ಬೈರ್ಸ್ಟೋವ್ 2019ರ ವಿಶ್ವಕಪ್ನಲ್ಲಿ ಈ ಸಾಧನೆ ಮಾಡಿದ್ದರು. 500ಕ್ಕೂ ಅಧಿಕ ರನ್ ಗಳಿಸಿರುವ ರಚಿನ್ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ರೇಸ್ನಲ್ಲಿ ಪ್ರಬಲ ಸ್ಪರ್ಧಿಯಾಗಿದ್ದಾರೆ. ರಚಿನ್ ತನ್ನ ಚೊಚ್ಚಲ ವಿಶ್ವಕಪ್ನಲ್ಲಿ 8 ಇನಿಂಗ್ಸ್ಗಳಲ್ಲಿ ಒಟ್ಟು 523 ರನ್ ಗಳಿಸಿದ್ದಾರೆ.
ರಚಿನ್ ಅವರು ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಜೊತೆಗೆ ಅತ್ಯಮೋಘ ಜೊತೆಯಾಟದಲ್ಲಿ ಭಾಗಿಯಾಗಿ ತಂಡದ ಬೃಹತ್ ಮೊತ್ತಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ರಚಿನ್ ಹಾಗೂ ವಿಲಿಯಮ್ಸನ್ 2ನೇ ವಿಕೆಟ್ಗೆ 180 ರನ್ ಜೊತೆಯಾಟ ನಡೆಸಿದರು. ವಿಲಿಯಮ್ಸನ್ 79 ಎಸೆತಗಳಲ್ಲಿ 95 ರನ್ ಗಳಿಸಿದರು.
ರಚಿನ್ ತನ್ನ ಅಮೋಘ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದು ಹಲವು ವಿಶ್ವಕಪ್ ದಾಖಲೆಯನ್ನು ಮರು ರಚಿಸುವ ವಿಶ್ವಾಸ ಮೂಡಿಸಿದ್ದಾರೆ. ವಿಶ್ವ ಮಟ್ಟದಲ್ಲಿ ಓರ್ವ ಭರವಸೆಯ ಪ್ರತಿಭೆಯಾಗಿ ತನ್ನ ಸ್ಥಾನ ಭದ್ರಪಡಿಸಿಕೊಳ್ಳುತ್ತಿದ್ದಾರೆ.