ಸೌರವ್ ಗಂಗುಲಿ ಅವರ ಮಹತ್ವದ ದಾಖಲೆ ಸರಿಗಟ್ಟಿದ ರಚಿನ್ ರವೀಂದ್ರ

ರಚಿನ್ ರವೀಂದ್ರ | PTI
ಲಾಹೋರ್ : ನ್ಯೂಝಿಲ್ಯಾಂಡ್ನ ಸ್ಟಾರ್ ಬ್ಯಾಟರ್ ರಚಿನ್ ರವೀಂದ್ರ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗುಲಿ ಅವರ ಹೆಸರಲ್ಲಿರುವ ಮಹತ್ವದ ದಾಖಲೆಯನ್ನು ಸರಿಗಟ್ಟುವ ಮೂಲಕ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಇತಿಹಾಸದ ಪುಸ್ತಕದಲ್ಲಿ ತನ್ನ ಹೆಸರನ್ನು ಅಚ್ಚೊತ್ತಿದ್ದಾರೆ.
2025ರ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬುಧವಾರ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ರವೀಂದ್ರ ಆಕರ್ಷಕ ಶತಕ ಗಳಿಸಿದರು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯೊಂದರಲ್ಲೇ ಹಲವು ಶತಕಗಳನ್ನು ಸಿಡಿಸಿದ ಆಟಗಾರರ ಗುಂಪಿನಲ್ಲಿ ಸ್ಥಾನ ಪಡೆದರು.
ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ರವೀಂದ್ರ ಟೂರ್ನಿಯಲ್ಲಿ ತನ್ನ 2ನೇ ಶತಕ ದಾಖಲಿಸಿದರು. ಒಂದೇ ಆವೃತ್ತಿಯ ಟೂರ್ನಿಯಲ್ಲಿ ಗರಿಷ್ಠ ಶತಕಗಳನ್ನು ಗಳಿಸಿರುವ ಸಾರ್ವಕಾಲಿಕ ಆಟಗಾರರ ಪಟ್ಟಿಯಲ್ಲಿ ಎರಡನೇ ಜಂಟಿ ಸ್ಥಾನ ಪಡೆದರು.
ವೆಸ್ಟ್ಇಂಡೀಸ್ನ ದಂತಕತೆ ಕ್ರಿಸ್ ಗೇಲ್ ಈ ವಿಶೇಷ ಕ್ಲಬ್ನ ನೇತೃತ್ವವಹಿಸಿದ್ದು, ಗೇಲ್ 2006ರ ಚಾಂಪಿಯನ್ಸ್ ಟ್ರೋಫಿಯೊಂದರಲ್ಲಿ 3 ಶತಕಗಳನ್ನು ಸಿಡಿಸಿದ್ದರು.
ರವೀಂದ್ರ ಇದೀಗ ಕ್ರಿಕೆಟ್ ದಿಗ್ಗಜರಾದ ಸೌರವ್ ಗಂಗುಲಿ, ಸಯೀದ್ ಅನ್ವರ್, ಹರ್ಷಲ್ ಗಿಬ್ಸ್, ಉಪುಲ್ ತರಂಗ, ಶೇನ್ ವಾಟ್ಸನ್ ಹಾಗೂ ಶಿಖರ್ ಧವನ್ ಅವರೊಂದಿಗೆ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ.
ಮೊದಲು ಬ್ಯಾಟಿಂಗ್ ಆಯ್ದುಕೊಂಡಿರುವ ಕಿವೀಸ್ ಭರ್ಜರಿ ಬ್ಯಾಟಿಂಗ್ ಮಾಡಿದೆ. ರವೀಂದ್ರ ಕೇವಲ 101 ಎಸೆತಗಳಲ್ಲಿ 108 ರನ್ ಗಳಿಸಿದ್ದಾರೆ. ಅವರ ಇನಿಂಗ್ಸ್ನಲ್ಲಿ 13 ಬೌಂಡರಿಗಳಿದ್ದವು.
ಒಂದೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ಶತಕ ಗಳಿಸಿದ ಆಟಗಾರರು
ಕ್ರಿಸ್ ಗೇಲ್(2006)-3 ಶತಕಗಳು
ಸೌರವ್ ಗಂಗುಲಿ(2000)-2 ಶತಕಗಳು
ಸಯೀದ್ ಅನ್ವರ್(2000)-2 ಶತಕಗಳು
ಹರ್ಷಲ್ ಗಿಬ್ಸ್(2002)-2 ಶತಕಗಳು
ಉಪುಲ್ ತರಂಗ(2006)-2 ಶತಕಗಳು
ಶೇನ್ ವಾಟ್ಸನ್(2009)-2 ಶತಕಗಳು
ಶಿಖರ್ ಧವನ್(2013)-2 ಶತಕಗಳು
ರಚಿನ್ ರವೀಂದ್ರ(2025)-2 ಶತಕಗಳು