ಚೆಂಡು ಹಣೆಗೆ ಬಡಿದು ರಕ್ತಸಿಕ್ತವಾಗಿ ಮೈದಾನದಿಂದ ಹೊರ ನಡೆದ ರಚಿನ್ ರವೀಂದ್ರ

Screengrab:X
ಕರಾಚಿ: ಇಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ನ್ಯೂಝಿಲೆಂಡ್ ತಂಡಗಳ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಹಣೆಗೆ ಚೆಂಡು ಬಡಿದು ನ್ಯೂಝಿಲೆಂಡ್ ತಂಡದ ಆಲ್ ರೌಂಡರ್ ರಚಿನ್ ರವೀಂದ್ರ ರಕ್ತಸಿಕ್ತವಾಗಿ ಮೈದಾನದಿಂದ ಹೊರ ನಡೆದ ಘಟನೆ ನಡೆದಿದೆ. 37ನೇ ಓವರ್ ನಲ್ಲಿ ಪಾಕಿಸ್ತಾನದ ಬ್ಯಾಟರ್ ಖುಶ್ದಿಲ್ ಶಾ ಹೊಡೆದ ಚೆಂಡಿನ ಗತಿಯನ್ನು ಹೊನಲು ಬೆಳಕಿನಡಿ ಗುರುತಿಸಲು ರಚಿನ್ ರವೀಂದ್ರ ವಿಫಲರಾದಂತೆ ಕಂಡು ಬಂದಿದ್ದರಿಂದ, ಅವರ ಹಣೆಗೆ ಚೆಂಡು ಬಡಿದು ಈ ಘಟನೆ ನಡೆದಿದೆ.
ರಚಿನ್ ರವೀಂದ್ರರ ಮುಖದ ಮೇಲೆ ರಕ್ತ ಸೋರುತ್ತಿತ್ತು. ನಂತರ, ವೈದ್ಯಕೀಯ ಸಿಬ್ಬಂದಿಯ ನೆರವಿನೊಂದಿಗೆ ರಕ್ತ ಹರಿಯುವುದನ್ನು ತಡೆಯಲು ಟವೆಲ್ ಒಂದನ್ನು ಒತ್ತಿ ಹಿಡಿದು ಅವರು ಮೈದಾನದಿಂದ ಹೊರ ನಡೆದರು. ಮೊದಲು ಅವರಿಗೆ ಮೈದಾನದಲ್ಲೇ ಹಣೆಯ ಗಾಯಕ್ಕೆ ಚಿಕಿತ್ಸೆ ನೀಡಲಾಯಿತು. ರಚಿನ್ ರವೀಂದ್ರ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ನ್ಯೂಝಿಲೆಂಡ್ ಕ್ರಿಕೆಟ್ ದೃಢಪಡಿಸಿದೆ.
ಈ ಘಟನೆಯನ್ನು ಭಯಾನಕ ಎಂದು ಬಣ್ಣಿಸಿರುವ ಗ್ಲೆನ್ ಫಿಲಿಪ್ಸ್, ಆದರೆ, ಈ ಅವಧಿಯುದ್ದಕ್ಕೂ ರಚಿನ್ ರವೀಂದ್ರ ಪ್ರಜ್ಞೆಯಲ್ಲಿದ್ದರು ಎಂದು ಖಚಿತ ಪಡಿಸಿದ್ದಾರೆ.
ಈ ನಡುವೆ, 50 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 330 ರನ್ ಗಳಿಸಿದ ನ್ಯೂಝಿಲೆಂಡ್ ತಂಡವು, ಪಂದ್ಯದಲ್ಲಿ 78 ರನ್ ಗಳ ಗೆಲುವು ಸಾಧಿಸಿತು. ಗ್ಲೆನ್ ಫಿಲಿಪ್ಸ್ ಗಳಿಸಿದ ಚೊಚ್ಚಲ ಏಕದಿನ ಶತಕದಿಂದ, ಪ್ರವಾಸಿ ನ್ಯೂಝಿಲೆಂಡ್ ತಂಡವು ಪಾಕಿಸ್ತಾನ ತಂಡಕ್ಕೆ ಬೃಹತ್ ಮೊತ್ತದ ಸವಾಲು ಒಡ್ಡಿತು. ನಂತರ, ಆರಂಭಿಕ ಬ್ಯಾಟರ್ ಫಖರ್ ಝಮಾನ್ ರ 84 ರನ್ ಗಳ ಹೊರತಾಗಿಯೂ, ಪಾಕಿಸ್ತಾನ ತಂಡ 252 ರನ್ ಗಳಿಗೆ ಆಲೌಟಾಯಿತು.
Get well soon, Rachin Ravindra. pic.twitter.com/QhJ82fxN4T
— Mufaddal Vohra (@mufaddal_vohra) February 8, 2025