ಮಗನ ಹೆಸರು ದ್ರಾವಿಡ್ ಮತ್ತು ತೆಂಡೂಲ್ಕರ್ ಹೆಸರುಗಳ ಸಮ್ಮಿಶ್ರಣವಲ್ಲ: ನ್ಯೂಝಿಲ್ಯಾಂಡ್ ಬ್ಯಾಟರ್ ರಚಿನ್ ರವೀಂದ್ರ ಅವರ ತಂದೆಯ ಸ್ಪಷ್ಟನೆ
ರಚಿನ್ ರವೀಂದ್ರ
ಮುಂಬೈ: ಈ ಬಾರಿಯ ವಿಶ್ವಕಪ್ ಕ್ರೀಡಾಕೂಟದಲ್ಲಿ ಹೆಚ್ಚು ಗಮನ ಸೆಳೆದಿರುವ ಆಟಗಾರ ನ್ಯೂಝಿಲ್ಯಾಂಡ್ ತಂಡದ ಬ್ಯಾಟರ್ ರಚಿನ್ ರವೀಂದ್ರ. ಇವರ ಪೂರ್ವಜರ ಮೂಲ ಬೆಂಗಳೂರು ಎಂಬುದು ಮತ್ತೊಂದು ವಿಶೇಷ. ವಿಶ್ವಕಪ್ ಕ್ರೀಡಾಕೂಟದುದ್ದಕ್ಕೂ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿರುವ ರಚಿನ್ ರವೀಂದ್ರ, ಈ ವಿಶ್ವಕಪ್ ಋತುವಿನ ಒಂಬತ್ತು ಪಂದ್ಯಗಳಿಂದ ಒಟ್ಟು 565 ರನ್ ಕಲೆ ಹಾಕಿದ್ದು, ಈ ವಿಶ್ವಕಪ್ ನಲ್ಲಿ ಈವರೆಗೆ ಅತ್ಯಧಿಕ ಮೊತ್ತ ಪೇರಿಸಿರುವ ಮೂರನೆಯ ಬ್ಯಾಟರ್ ಆಗಿದ್ದಾರೆ. ತಮ್ಮ 565 ರನ್ ಗಳ ಮೊತ್ತದಲ್ಲಿ ಅವರು 70.62 ರನ್ ಸರಾಸರಿಯೊಂದಿಗೆ ಮೂರು ಶತಕ ಹಾಗೂ ಎರಡು ಅರ್ಧ ಶತಕಗಳನ್ನು ದಾಖಲಿಸಿದ್ದಾರೆ.
ನಾಳೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಝಿಲೆಂಡ್ ತಂಡಗಳ ನಡುವೆ ನಡೆಯಲಿರುವ ಪ್ರಥಮ ಸೆಮಿಫೈನಲ್ ಪಂದ್ಯದಲ್ಲಿ ಇದೇ ಕಾರಣಕ್ಕೆ ರಚಿನ್ ರವೀಂದ್ರ ಆಕರ್ಷಣೆಯ ಕೇಂದ್ರ ಬಿಂದುವಾಗಿ ಬದಲಾಗಿದ್ದಾರೆ.
ಆದರೆ, ಇದೆಲ್ಲಕ್ಕೂ ಹೊರತಾಗಿ ಮತ್ತೊಂದು ಕಾರಣಕ್ಕೆ ರಚಿನ್ ರವೀಂದ್ರ ಚರ್ಚೆಯ ಕೇಂದ್ರ ಬಿಂದುವಾಗಿ ಬದಲಾಗಿದ್ದಾರೆ. ಅದು ಅವರ ಹೆಸರು ಭಾರತೀಯ ಆಟಗಾರರಾದ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಹೆಸರುಗಳ ಸಮ್ಮಿಶ್ರಣವಾಗಿದೆ ಎಂಬ ಮಾತುಗಳು ಹರಿದಾಡುತ್ತಿರುವ ಕಾರಣಕ್ಕೆ.
ಆದರೆ, ಈ ವದಂತಿಗಳನ್ನು ಅಲ್ಲಗಳೆದಿರುವ ರಚಿನ್ ತಂದೆ, ನನ್ನ ಮಗನಿಗೆ ಉದ್ದೇಶಪೂರ್ವಕವಾಗಿ ಆ ಹೆಸರಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ರಚಿನ್ ಜನಿಸಿದಾಗ ನನ್ನ ಪತ್ನಿಯು ಈ ಹೆಸರನ್ನು ಸೂಚಿಸಿದಳು ಹಾಗೂ ನಾವು ಆ ಕುರಿತು ಹೆಚ್ಚು ಚರ್ಚೆ ನಡೆಸಿಲ್ಲ ” ಎಂದು ರಚಿನ್ ತಂದೆ ರವಿ ಕೃಷ್ಣಮೂರ್ತಿ The Print ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಆ ಹೆಸರು ಉತ್ತಮವಾಗಿ ಧ್ವನಿಸುತ್ತಿತ್ತು, ಉಚ್ಚರಿಸಲು ಸುಲಭವಾಗಿತ್ತು ಮತ್ತು ಕ್ಲುಪ್ತವಾಗಿತ್ತು. ಹೀಗಾಗಿ ನಾವು ಆ ಹೆಸರನ್ನೇ ಇಡಲು ತೀರ್ಮಾನಿಸಿದೆವು. ನಮಗೆ ಕೆಲ ವರ್ಷಗಳ ನಂತರವಷ್ಟೇ ಈ ಹೆಸರು ರಾಹುಲ್ ಮತ್ತು ಸಚಿನ್ ಹೆಸರುಗಳ ಸಮ್ಮಿಶ್ರಣ ಎಂಬ ಸಂಗತಿ ಅರಿವಿಗೆ ಬಂದಿತು. ನಾವು ನಮ್ಮ ಪುತ್ರನನ್ನು ಕ್ರಿಕೆಟಿಗನನ್ನಾಗಿಸಲಾಗಲಿ ಅಥವಾ ಇನ್ನಾವುದೇ ಕಾರಣಕ್ಕಾಗಲಿ ಆತನಿಗೆ ಆ ಹೆಸರನ್ನು ಉದ್ದೇಶಪೂರ್ವಕವಾಗಿ ಇಡಲಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.