ಕೆಎಸ್ಸಿಎ 3ನೇ ಡಿವಿಜನ್ ಪಂದ್ಯ | ಪುತ್ರ ಅನ್ವಯ್ ಜೊತೆ ಬ್ಯಾಟಿಂಗ್ ಮಾಡಿದ ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್ | PC : PTI
ಕೋಲಾರ: ಕೆಎಸ್ಸಿಎ 3ನೇ ಡಿವಿಜನ್ ಪಂದ್ಯದಲ್ಲಿ ಮಾಲೂರಿನ ವಿಜಯ ಕ್ರಿಕೆಟ್ ಕ್ಲಬ್ ಅನ್ನು ಪ್ರತಿನಿಧಿಸಿದ ಭಾರತದ ಮಾಜಿ ನಾಯಕ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಶನಿವಾರ ತನ್ನ ಪುತ್ರ ಅನ್ವಯ್ ಜೊತೆ ಬ್ಯಾಟಿಂಗ್ ಮಾಡಿದರು.
6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ದ್ರಾವಿಡ್ 8 ಎಸೆತಗಳಲ್ಲಿ 1 ಬೌಂಡರಿ ಸಹಿತ 10 ರನ್ ಗಳಿಸಿದರು. ದ್ರಾವಿಡ್ ಪುತ್ರ ಅನ್ವಯ್ 60 ಎಸೆತಗಳಲ್ಲಿ 8 ಬೌಂಡರಿಗಳ ಸಹಿತ 58 ರನ್ ಗಳಿಸಿದ್ದು, ವಿಜಯ್ ಕ್ರಿಕೆಟ್ ಕ್ಲಬ್ ತಂಡವು ಯಂಗ್ ಲಯನ್ಸ್ ಕ್ಲಬ್ ತಂಡದ ವಿರುದ್ಧ 7 ವಿಕೆಟ್ಗಳ ನಷ್ಟಕ್ಕೆ 345 ರನ್ ಗಳಿಸಲು ಕೊಡುಗೆ ನೀಡಿದರು.
ಸ್ವಪ್ನಿಲ್ (107 ರನ್, 50 ಎಸೆತ, 12 ಬೌಂಡರಿ, 4 ಸಿಕ್ಸರ್)ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಅನ್ವಯ್ ವಿಕೆಟ್ಕೀಪರ್-ಬ್ಯಾಟರ್ ಆಗಿದ್ದು, ಅನ್ವಯ್ ಅಣ್ಣ ಸಮಿತ್ ದ್ರಾವಿಡ್ ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಮಿಂಚುತ್ತಿದ್ದಾರೆ.
ದ್ರಾವಿಡ್ ಅವರು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ನ ಶಿಬಿರದಲ್ಲಿ ಭಾಗವಹಿಸಿ ಇತ್ತೀಚೆಗೆ ಬೆಂಗಳೂರಿಗೆ ವಾಪಸಾಗಿದ್ದರು.