3ನೇ ಟೆಸ್ಟ್: ಭಾರತವನ್ನು ಫಾಲೋ ಆನ್ನಿಂದ ಪಾರಾಗಿಸಿದ ಆಕಾಶ್ ದೀಪ್-ಬುಮ್ರಾ
ರಾಹುಲ್, ರವೀಂದ್ರ ಜಡೇಜ ಅರ್ಧಶತಕ
Photo:X/BCCI
ಬ್ರಿಸ್ಬೇನ್: ಆಸ್ಟ್ರೇಲಿಯ ನೆಲದಲ್ಲಿ ಆಸ್ಟ್ರೇಲಿಯದ ವಿರುದ್ಧ ಭಾರತೀಯ ಬ್ಯಾಟಿಂಗ್ ವಿಭಾಗ ಪರದಾಟ ಹಾಗೂ ಹೋರಾಟ ನಡೆಸುತ್ತಿರುವುದು ಹೊಸತೇನಲ್ಲ. 90 ಹಾಗೂ 2000ರ ದಶಕದಲ್ಲಿ ಇದು ಸಾಮಾನ್ಯವಾಗಿತ್ತು. 2020-21ರಲ್ಲಿ ಭಾರತದ ಐತಿಹಾಸಿಕ ಗೆಲುವನ್ನು ಯಾರೂ ಮರೆಯುವಂತಿಲ್ಲ. ಸಿಡ್ನಿಯಲ್ಲಿ ಹನುಮ ವಿಹಾರಿ ಹಾಗೂ ಆರ್.ಅಶ್ವಿನ್ ಭಾರತಕ್ಕೆ ಆಸರೆಯಾಗಿದ್ದರೆ, ಅದೇ ವರ್ಷ ಬ್ರಿಸ್ಬೇನ್ ಟೆಸ್ಟ್ನಲ್ಲಿ ರಿಷಭ್ ಪಂತ್ ಇತಿಹಾಸ ರಚಿಸುವಲ್ಲಿ ಬಾಲಂಗೋಚಿ ನವದೀಪ್ ಸೈನಿ ಪಾತ್ರ ಸ್ಮರಣೀಯವಾಗಿತ್ತು.
ಈ ಬಾರಿ ಜಸ್ಪ್ರಿತ್ ಬುಮ್ರಾ ಹಾಗೂ ಆಕಾಶ್ ದೀಪ್ ಅವರು ಭಾರತವನ್ನು ಸೋಲುವ ಭೀತಿಯಿಂದ ಪಾರಾಗಿಸಿದ್ದಾರೆ. ಆಸ್ಟ್ರೇಲಿಯದ ಮೊದಲ ಇನಿಂಗ್ಸ್ 445 ರನ್ಗೆ ಉತ್ತರಿಸಹೊರಟ ಭಾರತ ಕ್ರಿಕೆಟ್ ತಂಡವು 77 ರನ್ ಗಳಿಸಿ ಕ್ರೀಸ್ನಲ್ಲಿ ನೆಲೆಕಂಡಿದ್ದ ಆಲ್ರೌಂಡರ್ ರವೀಂದ್ರ ಜಡೇಜ ವಿಕೆಟ್ ಕಳೆದುಕೊಂಡಾಗ 213 ರನ್ಗೆ 9ನೇ ವಿಕೆಟ್ ಕಳೆದುಕೊಂಡಿತ್ತು. ಭಾರತ ತಂಡಕ್ಕೆ ಫಾಲೋ ಆನ್ನಿಂದ ಪಾರಾಗಲು ಇನ್ನೂ 33 ರನ್ ಗಳಿಸುವ ಅಗತ್ಯವಿತ್ತು.
ಆಗ ಆಸ್ಟ್ರೇಲಿಯ ತಂಡವು ಭಾರತದ ಇನಿಂಗ್ಸ್ಗೆ ತೆರೆ ಎಳೆದು ಫಾಲೋ ಆನ್ ವಿಧಿಸಿ 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ ಸಾಧಿಸುವ ಲಕ್ಷಣ ಕಂಡುಬಂದಿತು. ಆಗ 10ನೇ ವಿಕೆಟ್ಗೆ 39 ರನ್ ಜೊತೆಯಾಟ ನಡೆಸಿದ ಬುಮ್ರಾ ಹಾಗೂ ಆಕಾಶ್ ದೀಪ್ ಭಾರತವನ್ನು ಫಾಲೋ ಆನ್ನಿಂದ ಪಾರಾಗಿಸಿದರು. 4ನೇ ದಿನದಾಟದಂತ್ಯಕ್ಕೆ ಭಾರತವು ತನ್ನ ಮೊದಲ ಇನಿಂಗ್ಸ್ನಲ್ಲಿ 9 ವಿಕೆಟ್ಗಳ ನಷ್ಟಕ್ಕೆ 252 ರನ್ ಗಳಿಸಿದೆ. ಇನ್ನೂ 193 ರನ್ ಹಿನ್ನಡೆಯಲ್ಲಿದೆ.
ವೇಗದ ಬೌಲರ್ ಜೋಶ್ ಹೇಝಲ್ವುಡ್ ಗಾಯದ ಸಮಸ್ಯೆಯಿಂದ ಮೈದಾನವನ್ನು ತೊರೆದಿರುವುದು ಆಸ್ಟ್ರೇಲಿಯದ ಗೆಲುವಿನ ಅವಕಾಶವನ್ನು ಕ್ಷೀಣಿಸುವಂತೆ ಮಾಡಿತು. ಹೇಝಲ್ವುಡ್ ಅನುಪಸ್ಥಿತಿಯಲ್ಲಿ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಹಾಗೂ ನಾಥನ್ ಲಿಯೊನ್ ಬೌಲಿಂಗ್ ದಾಳಿ ಮುಂದುವರಿಸಿದ್ದು, ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಸ್ವಲ್ಪ ಸಾಥ್ ನೀಡಿದರು.
ನಾಲ್ಕನೇ ದಿನದಾಟದಲ್ಲೂ ಮಳೆ ಅಡ್ಡಿಪಡಿಸಿದ ಕಾರಣ ಆಸ್ಟ್ರೇಲಿಯದ ಬೌಲರ್ಗಳು ಆಗಾಗ ವಿಶ್ರಾಂತಿ ಪಡೆದರು. ಸೋಮವಾರದಷ್ಟು ಮಳೆ ಪಂದ್ಯಕ್ಕೆ ಅಡ್ಡಿಯಾಗದಿದ್ದರೂ ಮಂದ ಬೆಳಕಿನಿಂದಾಗಿ ಪಂದ್ಯ ಸ್ಥಗಿತವಾಗುವ ಮೊದಲು 57.5 ಓವರ್ ಪಂದ್ಯವನ್ನಷ್ಟೇ ಆಡಲು ಸಾಧ್ಯವಾಯಿತು.
ಬುಮ್ರಾ (ಔಟಾಗದೆ 10, 27 ಎಸೆತ, 1 ಸಿಕ್ಸರ್) ಹಾಗೂ ಆಕಾಶ್ ದೀಪ್ (ಔಟಾಗದೆ 27) ನಡುವಿನ 10ನೇ ವಿಕೆಟ್ ಜೊತೆಯಾಟವನ್ನು ಬೇರ್ಪಡಿಸಲು ಸ್ಟಾರ್ಕ್, ಕಮಿನ್ಸ್ ಹಾಗೂ ಲಿಯೊನ್ ಎಲ್ಲ ಪ್ರಯತ್ನವನ್ನು ಮಾಡಿದರು. ಭಾರತೀಯ ಆಟಗಾರರು ಆಕ್ರಮಣಕಾರಿ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿ ಒತ್ತಡವನ್ನು ಹಿಮ್ಮೆಟ್ಟಿಸಿದರು.
ಅಡಿಲೇಡ್ ಓವಲ್ನಲ್ಲಿ ಭಾರತವನ್ನು ಕಾಡಿದ್ದ ನಾಯಕ ಕಮಿನ್ಸ್ ಬೌಲಿಂಗ್ನಲ್ಲಿ ಬುಮ್ರಾ ಸಿಕ್ಸರ್ ಸಿಡಿಸಿದರು. ಆಕಾಶ್ದೀಪ್ ಬೌಂಡರಿ ಗಳಿಸಿ ಆಸ್ಟ್ರೇಲಿಯಕ್ಕೆ ನಿರಾಶೆವುಂಟು ಮಾಡಿದರು.
75ನೇ ಓವರ್ನಲ್ಲಿ ಆಕಾಶ್ ದೀಪ್ ಇನ್ನೊಂದು ಬೌಂಡರಿ ಗಳಿಸಿದಾಗ ಭಾರತವು ಫಾಲೋ-ಆನ್ನಿಂದ ತಪ್ಪಿಸಿಕೊಂಡಿತು. ಆಗ ಡ್ರೆಸ್ಸಿಂಗ್ ರೂಮ್ನಲ್ಲಿ ಸಂಭ್ರಮದ ದೃಶ್ಯ ಕಂಡುಬಂತು. ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮುಖದಲ್ಲಿ ಮಂದಹಾಸ ಕಂಡುಬಂತು.
ಆಕಾಶ್ ದೀಪ್ ಸಿಕ್ಸರ್ ಸಿಡಿಸಿದಾಗ ಕೊಹ್ಲಿ ಅವರು ಸಂಭ್ರಮಪಟ್ಟಿದ್ದು ಗಮನ ಸೆಳೆಯಿತು. 10ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 39 ರನ್ ಸೇರಿಸಿದ ಆಕಾಶ್ ದೀಪ್ ಹಾಗೂ ಬುಮ್ರಾ ನಗುಮುಖದೊಂದಿಗೆ ಮೈದಾನವನ್ನು ತೊರೆದರು.
ಭಾರತ ತಂಡವು ಫಾಲೋ-ಆನ್ನಿಂದ ಪಾರಾಗಲು ಕೆ.ಎಲ್.ರಾಹುಲ್ ಹಾಗೂ ರವೀಂದ್ರ ಜಡೇಜ ಅವರ ಅರ್ಧಶತಕಗಳ ಕೊಡುಗೆ ಪ್ರಮುಖ ಕಾರಣವಾಯಿತು. ಆದರೆ ಕೊನೆಯ ವಿಕೆಟ್ನಲ್ಲಿ ಅಮೂಲ್ಯ ರನ್ ಸೇರಿಸಿದ ಬುಮ್ರಾ ಹಾಗೂ ಆಕಾಶ್ ದೀಪ್ ಅವರ ಪರಿಶ್ರಮವನ್ನು ಕಡೆಗಣಿಸಲಾಗದು.
ಬುಮ್ರಾ ಹಾಗೂ ಆಕಾಶ್ ಅವರು ಗಾಬಾ ಕ್ರೀಡಾಂಗಣದಲ್ಲಿ 10ನೇ ವಿಕೆಟ್ನಲ್ಲಿ ಗರಿಷ್ಠ ಜೊತೆಯಾಟದಲ್ಲಿ ಭಾಗಿಯಾದರು. 2020ರ ನಂತರ ವಿದೇಶದಲ್ಲಿ ಕೊನೆಯ ವಿಕೆಟ್ನಲ್ಲಿ ದಾಖಲಾದ 2ನೇ ಗರಿಷ್ಠ ಜೊತೆಗಾರಿಕೆ ಇದಾಗಿದೆ. ಬುಮ್ರಾ ಅವರೇ ಈ ಹಿಂದೆ ಇಂಗ್ಲೆಂಡ್ ವಿರುದ್ಧ ಮುಹಮ್ಮದ್ ಸಿರಾಜ್ರೊಂದಿಗೆ 50 ರನ್ ಜೊತೆಯಾಟ ನಡೆಸಿದ್ದರು.
ಆಕಾಶ್ ದೀಪ್ ಔಟಾಗದೆ 27 ರನ್(31 ಎಸೆತ, 2 ಬೌಂಡರಿ, 1 ಸಿಕ್ಸರ್) ಗಳಿಸಿದ್ದು, ಆಸ್ಟ್ರೇಲಿಯದಲ್ಲಿ ಭಾರತದ 11ನೇ ಕ್ರಮಾಂಕದ ಆಟಗಾರನಾಗಿ 2ನೇ ಗರಿಷ್ಠ ಸ್ಕೋರ್ ಗಳಿಸಿದರು. ಗಾಬಾ ಸ್ಟೇಡಿಯಮ್ನಲ್ಲಿ 3ನೇ ಗರಿಷ್ಠ ಮೊತ್ತ ಕಲೆ ಹಾಕಿದರು.
ಬುಮ್ರಾ ಹಾಗೂ ಆಕಾಶ್ ದೀಪ್ ಬುಧವಾರ ಮತ್ತೊಮ್ಮೆ ಬ್ಯಾಟಿಂಗ್ ಮಾಡಲು ಆಗಮಿಸಲಿದ್ದು, ಇದೀಗ ಭಾರತವು ದೊಡ್ಡ ತಡೆಯೊಂದನ್ನು ದಾಟಿದೆ. ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ನಡೆಸಲಿದೆ.
ಇನ್ನೊಂದು ದಿನದಾಟ ಬಾಕಿ ಉಳಿದಿದ್ದು, ವೇಗದ ಬೌಲರ್ ಹೇಝಲ್ವುಡ್ ಗಾಯದ ಸಮಸ್ಯೆಯಿಂದಾಗಿ ಈ ಪಂದ್ಯದಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ 3ನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಆಸ್ಟ್ರೇಲಿಯದ ಅವಕಾಶಕ್ಕೆ ತೀವ್ರ ಹಿನ್ನಡೆಯಾಗಿದೆ. ಹೇಝಲ್ವುಡ್ ಸರಣಿಯ ಇನ್ನುಳಿದ ಪಂದ್ಯದಿಂದಲೇ ಹೊರ ನಡೆಯುವ ಸಾಧ್ಯತೆಯಿದೆ.
ರಾಹುಲ್, ಜಡೇಜ ಅರ್ಧಶತಕ:
ಭಾರತ ಕ್ರಿಕೆಟ್ ತಂಡವು ಮಂಗಳವಾರ 4 ವಿಕೆಟ್ಗಳ ನಷ್ಟಕ್ಕೆ 51 ರನ್ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿತು. ಔಟಾಗದೆ 33 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಕೆ.ಎಲ್.ರಾಹುಲ್ ಅವರು ಕಮಿನ್ಸ್ ಎಸೆದ ದಿನದ ಮೊದಲ ಎಸೆತದಲ್ಲಿ ಸ್ಟೀವ್ ಸ್ಮಿತ್ರಿಂದ ಜೀವದಾನ ಪಡೆದರು. ಇದರ ಲಾಭ ಪಡೆದ ಕರ್ನಾಟಕ ಆಟಗಾರ 84 ರನ್(139 ಎಸೆತ, 8 ಬೌಂಡರಿ)ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಾಯಕ ರೋಹಿತ್ ಶರ್ಮಾ 10 ರನ್ ಗಳಿಸಿ ಕಮಿನ್ಸ್ಗೆ ಔಟಾದರು.
ಆಗ ರವೀಂದ್ರ ಜಡೇಜ (77 ರನ್, 123 ಎಸೆತ, 7 ಬೌಂಡರಿ, 1 ಸಿಕ್ಸರ್) ಅವರೊಂದಿಗೆ 6ನೇ ವಿಕೆಟ್ಗೆ 67 ರನ್ ಜೊತೆಯಾಟ ನಡೆಸಿದ ರಾಹುಲ್ ಅವರು ಭಾರತ ತಂಡವನ್ನು ಆಧರಿಸಿದರು. ರಾಹುಲ್ ಔಟಾದ ನಂತರ ನಿತೀಶ್ ಕುಮಾರ್ ರೆಡ್ಡಿ (16 ರನ್, 61 ಎಸೆತ) ಜೊತೆ ಕೈಜೋಡಿಸಿದ ಜಡೇಜ ಅವರು 7ನೇ ವಿಕೆಟ್ಗೆ 53 ರನ್ ಪಾಲುದಾರಿಕೆಯಲ್ಲಿ ಭಾಗಿಯಾದರು.
ಭಾರತವು ಫಾಲೋ-ಆನ್ ಭೀತಿಯಲ್ಲಿದ್ದಾಗ ಬುಮ್ರಾ ಹಾಗೂ ಆಕಾಶ್ ತಂಡವನ್ನು ಆಧರಿಸಿ ಆಪತ್ಬಾಂಧವರಾದರು.
ಆಸ್ಟ್ರೇಲಿಯದ ಬೌಲಿಂಗ್ ವಿಭಾಗದಲ್ಲಿ ನಾಯಕ ಪ್ಯಾಟ್ ಕಮಿನ್ಸ್(4-80)ಯಶಸ್ವಿ ಬೌಲರ್ ಎನಿಸಿಕೊಂಡರೆ, ಮಿಚೆಲ್ ಸ್ಟಾರ್ಕ್(3-83)ಅವರು ಕಮಿನ್ಸ್ಗೆ ಸಾಥ್ ನೀಡಿದರು.