ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ರಾಹುಲ್ ವಿಕೆಟ್ ಕೀಪಿಂಗ್ ಮಾಡುವುದಿಲ್ಲ: ರಾಹುಲ್ ದ್ರಾವಿಡ್
ಕೆ.ಎಲ್.ರಾಹುಲ್ , ರಾಹುಲ್ ದ್ರಾವಿಡ್ | Photo: X
ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕೆ.ಎಲ್.ರಾಹುಲ್ ವಿಕೆಟ್ ಕೀಪಿಂಗ್ ಮಾಡಲಾರರು ಎಂದು ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ದೃಢಪಡಿಸಿದ್ದಾರೆ.
ಈ ನಿರ್ಧಾರದ ಬಗ್ಗೆ ತಂಡವು ಸ್ಪಷ್ಟವಾಗಿದೆ. ವಿಕೆಟ್ ಕೀಪರ್-ಬ್ಯಾಟರ್ ಪಾತ್ರದಲ್ಲಿ ಕೆ.ಎಸ್. ಭರತ್ ಹಾಗೂ ಧ್ರುವ್ ಜುರೆಲ್ ನಡುವೆ ಆಯ್ಕೆ ನಡೆಯಲಿದೆ ಎಂದು ದ್ರಾವಿಡ್ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ರಾಹುಲ್ ವಿಕೆಟ್ ಕೀಪರ್ ಆಗಿ ಆಡುವುದಿಲ್ಲ. ಆಯ್ಕೆಗೆ ಸಂಬಂಧಿಸಿ ನಾವು ಸ್ಪಷ್ಟವಾಗಿದ್ದೇವೆ. ನಾವು ಇತರ ಇಬ್ಬರು ವಿಕೆಟ್ ಕೀಪರ್ ಗಳನ್ನು ಆಯ್ಕೆ ಮಾಡಿದ್ದೇವೆ. ದಕ್ಷಿಣ ಆಫ್ರಿಕಾದಲ್ಲಿ ರಾಹುಲ್ ತಂಡಕ್ಕಾಗಿ ಅಮೋಘ ಕೆಲಸ ಮಾಡಿದ್ದಾರೆ. ಸರಣಿ ಡ್ರಾ ಮಾಡಿಕೊಳ್ಳಲು ಪ್ರಮುಖ ಪಾತ್ರವಹಿಸಿದ್ದರು. ಐದು ಪಂದ್ಯಗಳ ಸರಣಿ ಹಾಗೂ ಆಡುವ ವಾತಾವರಣವನ್ನು ಪರಿಗಣಿಸಿ ನಾವು ಇತರ ಇಬ್ಬರು ಕೀಪರ್ ಗಳಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತೇವೆ ಎಂದು ದ್ರಾವಿಡ್ ಹೇಳಿದ್ದಾರೆ.
ರಿಷಭ್ ಪಂತ್ ಬದಲಿಗೆ ಟೀಮ್ ಇಂಡಿಯಾಕ್ಕೆ ಪ್ರವೇಶಿಸಿದ್ದ ಭರತ್ ಭಾರತದ ವಾತಾವರಣದಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲರು. ಸಮಗ್ರ ಕೊಡುಗೆಯನ್ನು ಪರಿಗಣಿಸಿ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭರತ್ ವಿಕೆಟ್ ಕೀಪರ್-ಬ್ಯಾಟರ್ ಪಾತ್ರಕ್ಕೆ ಆಯ್ಕೆಯಾಗುವ ಸಾಧ್ಯತೆ ಅಧಿಕವಿದೆ.
ಸರಣಿಯ ಮೊದಲ ಪಂದ್ಯವು ಗುರುವಾರದಿಂದ ಆರಂಭವಾಗಲಿದೆ. ಇಂಗ್ಲೆಂಡ್ ವಿರುದ್ಧ ಭಾರತದ ರಣನೀತಿಯಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಪಾತ್ರದ ಕುರಿತ ನಿರ್ಧಾರವು ನಿರ್ಣಾಯಕವಾಗಿದೆ.