ಸಿಎಸ್ಕೆ ವಿರುದ್ಧ ಆರ್ಸಿಬಿಯ ಗೆಲ್ಲಲೇಬೇಕಾದ ಪಂದ್ಯಕ್ಕೆ ಮಳೆ ಭೀತಿ
ಆರ್ಸಿಬಿ ಪ್ಲೇ ಆಫ್ ಲೆಕ್ಕಾಚಾರ ಏನು?
ಸಿಎಸ್ಕೆ ತಂಡ (PC: X \ @ChennaiIPL) | ಆರ್ಸಿಬಿ ತಂಡ (PC: X \ @RCBTweets)
ಬೆಂಗಳೂರು: ಈಗ ನಡೆಯುತ್ತಿರುವ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಪ್ಲೇ ಆಫ್ ಸ್ಪರ್ಧೆಯಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ತಂಡ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್ಕೆ)ವಿರುದ್ಧ ಶನಿವಾರ ಮಾಡು ಇಲ್ಲವೇ ಮಡಿ ಪಂದ್ಯವನ್ನು ಆಡಲಿದ್ದು, ಈ ರೋಚಕ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಎಂ. ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಮಳೆ ಮೋಡ ದೂರ ಇರಲಿ ಎಂದು ಆರ್ಸಿಬಿ ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಶನಿವಾರ ರಾತ್ರಿ 7:30ಕ್ಕೆ ಸರಿಯಾಗಿ ಆರಂಭವಾಗಲಿರುವ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ಲೇ ಆಫ್ಗೆ ಪ್ರವೇಶಿಸುವ ನಿಟ್ಟಿನಲ್ಲಿ ಆರ್ಸಿಬಿ ಈ ಪಂದ್ಯದಲ್ಲಿ ಉತ್ತಮ ರನ್ರೇಟ್ನೊಂದಿಗೆ ಗೆಲ್ಲುವ ಒತ್ತಡಕ್ಕೆ ಸಿಲುಕಿದೆ.
ಪ್ರಸಕ್ತ ಐಪಿಎಲ್ನಲ್ಲಿ ನಾಲ್ಕನೇ ಪ್ಲೇ ಆಫ್ ಸ್ಥಾನ ನಿರ್ಧರಿಸುವ ಈ ಈ ನಿರ್ಣಾಯಕ ಪಂದ್ಯಕ್ಕೆ ಮಳೆಯ ಭೀತಿ ಕಾಡುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಶನಿವಾರ ಸಂಜೆ ಬೆಂಗಳೂರಿನ ಕೆಲವು ಭಾಗಗಳಲ್ಲಿ ಸಿಡಿಲು ಗುಡುಗು ಸಹಿತ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಸಿಎಸ್ಕೆ ವಿರುದ್ದ ಪಂದ್ಯ ಸೋತರೆ ಅಥವಾ ಮಳೆಯಿಂದಾಗಿ ಪಂದ್ಯ ರದ್ದುಗೊಂಡರೆ ಆರ್ಸಿಬಿಯ ಪ್ಲೇ ಆಫ್ ಕನಸು ಭಗ್ನಗೊಳ್ಳಲಿದೆ.
ಆರ್ಸಿಬಿ 13 ಪಂದ್ಯಗಳಲ್ಲಿ 6ರಲ್ಲಿ ಗೆಲುವು, 7ರಲ್ಲಿ ಸೋಲನುಭವಿಸಿ ಒಟ್ಟು 12 ಅಂಕಗಳನ್ನು ಕಲೆ ಹಾಕಿದೆ. ಅಲ್ಲದೆ +0.387 ನೆಟ್ರನ್ರೇಟ್ ಕಾಯ್ದುಕೊಂಡಿದೆ. ಮತ್ತೊಂದೆಡೆ ಸಿಎಸ್ಕೆ ತಂಡ 13 ಪಂದ್ಯಗಳಲ್ಲಿ 7ರಲ್ಲಿ ಜಯ, 6ರಲ್ಲಿ ಸೋಲು ಕಂಡಿದ್ದು ಒಟ್ಟು 14 ಅಂಕಗಳನ್ನು ಹೊಂದಿದೆ. +0.528 ನೆಟ್ ರನ್ರೇಟ್ ಹೊಂದಿದೆ.
ಕೋಲ್ಕತಾ ನೈಟ್ ರೈಡರ್ಸ್, ರಾಜಸ್ಥಾನ ರಾಯಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳು ಈಗಾಗಲೇ ಪ್ಲೇ-ಆಫ್ ಸುತ್ತಿಗೆ ಪ್ರವೇಶಿಸಿವೆ. ಅಲ್ಲದೆ 4ನೇ ಸ್ಥಾನಕ್ಕಾಗಿ ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ.
ತನ್ನ ಕೊನೆಯ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು ಮಣಿಸುವುದಷ್ಟೇ ಅಲ್ಲದೆ ಅದಕ್ಕಿಂತಲೂ ಉತ್ತಮ ರನ್ರೇಟ್ ಕಾಯ್ದುಕೊಳ್ಳುವುದು ಆರ್ಸಿಬಿ ಪಾಲಿಗೆ ಅತ್ಯಂತ ಮುಖ್ಯವೆನಿಸಿದೆ. ಇದಕ್ಕೆ ಮಳೆಯ ಕೃಪೆಯೂ ಬೇಕಾಗಿದೆ.
ಆರ್ಸಿಬಿ ಪ್ಲೇ ಆಫ್ ಲೆಕ್ಕಾಚಾರ..
ಸಿಎಸ್ಕೆ ವಿರುದ್ಧ ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಿದರೆ 200 ರನ್ ಗುರಿ ನೀಡಬೇಕು. ಆ ನಂತರ ಎಫ್ಡು ಪ್ಲೆಸಿಸ್ ತಂಡ ಎದುರಾಳಿ ತಂಡವನ್ನು 182ಕ್ಕೆ ನಿಯಂತ್ರಿಸಿ ಕನಿಷ್ಠ 18 ರನ್ ಅಂತರದಿಂದ ಗೆಲ್ಲಬೇಕು. ಆರ್ಸಿಬಿ 201 ಅಥವಾ ಅದಕ್ಕಿಂತ ಹೆಚ್ಚು ರನ್ ಚೇಸಿಂಗ್ ಮಾಡಿದರೆ ಕನಿಷ್ಠ 11 ಎಸೆತಗಳು ಬಾಕಿ ಇರುವಾಗಲೇ ಗೆಲುವು ದಾಖಲಿಸಬೇಕಿದೆ. ಆ ಮೂಲಕ ಸಿಎಸ್ಕೆಗಿಂತಲೂ ಉತ್ತಮ ರನ್ರೇಟ್ ಕಾಯ್ದುಕೊಂಡು 4ನೇ ತಂಡವಾಗಿ ಪ್ಲೇ ಆಫ್ಗೆ ಲಗ್ಗೆ ಇಡಲಿದೆ.
ಸತತ 6 ಸೋಲುಗಳ ನಂತರ ಸತತ 5 ಗೆಲುವು
ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆರ್ಸಿಬಿ ಸತತ ಆರು ಪಂದ್ಯಗಳಲ್ಲಿ ಸೋಲನ್ನು ಕಂಡಿತ್ತು. ಅಲ್ಲದೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.ಆಡಿರುವ 8 ಪಂದ್ಯಗಳಲ್ಲಿ ಒಂದು ಗೆಲುವು ಮಾತ್ರ ದಾಖಲಿಸಿತ್ತು. ಆದರೆ ಬಳಿಕದ 5 ಪಂದ್ಯಗಳಲ್ಲಿ ಗೆದ್ದಿರುವ ಆರ್ಸಿಬಿ ಪ್ಲೇ ಆಫ್ ಸನಿಹಕ್ಕೆ ಬಂದು ನಿಂತಿದೆ.
ಸಿಎಸ್ಕೆ ಪ್ಲೇ ಆಫ್ ಅರ್ಹತೆಯ ಲೆಕ್ಕಾಚಾರ
ಸಿಎಸ್ಕೆ ತಂಡ ಆರ್ಸಿಬಿ ವಿರುದ್ಧ ಜಯ ಗಳಿಸಿದರೆ ಸುಲಭವಾಗಿ ಪ್ಲೇ ಆಫ್ಗೆ ತೇರ್ಗಡೆಯಾಗಲಿದೆ. ಏಕೆಂದರೆ ಐದು ಬಾರಿಯ ಚಾಂಪಿಯನ್ ಆರ್ಸಿಬಿಗಿಂತ(12 ಅಂಕ)ಎರಡು ಅಂಕ ಹೆಚ್ಚು ಹೊಂದಿದೆ. ಆರ್ಸಿಬಿಗೆ ಹೋಲಿಸಿದರೆ ಉತ್ತಮ ರನ್ರೇಟ್ ಹೊಂದಿರುವ ಸಿಎಸ್ಕೆ ಅಲ್ಪ ಅಂತರದಿಂದ ಸೋತರೂ ಮುಂದಿನ ಸುತ್ತಿಗೇರಲಿದೆ. ಒಂದು ವೇಳೆ ಪಂದ್ಯ ಮಳೆಗಾಹುತಿಯಾದರೆ ಇಲ್ಲವೇ ಫಲಿತಾಂಶವೇ ಬಾರದೆ ಇದ್ದರೆ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಳ್ಳುತ್ತವೆ. ಇದು ಸಿಎಸ್ಕೆಗೆ ಪ್ಲೇ ಆಫ್ ಸುತ್ತಿಗೆ ಪ್ರವೇಶಿಸಲು ಸಾಕಾಗುತ್ತದೆ.
ಆರ್ಸಿಬಿಯಷ್ಟೇ ಅಂಕ(12) ಗಳಿಸಿದ್ದರೂ ಏಳನೇ ಸ್ಥಾನದಲ್ಲಿರುವ ಲಕ್ನೊ ಸೂಪರ್ ಜಯಂಟ್ಸ್ ತಂಡದ ನಕಾರಾತ್ಮಕ ನೆಟ್ ರನ್ರೇಟ್(-0.787)ಪ್ಲೇ ಆಫ್ ವಿಶ್ವಾಸಕ್ಕೆ ಧಕ್ಕೆ ತಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ 14 ಅಂಕ ಗಳಿಸಿದೆ. ಆದರೆ -0.377 ನೆಟ್ರನ್ರೇಟ್ನೊಂದಿಗೆ ತನ್ನ ಲೀಗ್ ಅಭಿಯಾನವನ್ನು ಈಗಾಗಲೇ ಅಂತ್ಯಗೊಳಿಸಿದೆ.