ರಾಜಸ್ಥಾನ ರಾಯಲ್ಸ್ ಗೆಲುವಿಗೆ 197 ರನ್ ಗುರಿ ನೀಡಿದ ಲಕ್ನೊ
ಕೆ.ಎಲ್.ರಾಹುಲ್, ದೀಪಕ್ ಹೂಡಾ ಅರ್ಧಶತಕ
PC : X
ಲಕ್ನೊ : ನಾಯಕ ಕೆ.ಎಲ್.ರಾಹುಲ್ (75 ರನ್, 48 ಎಸೆತ, 8 ಬೌಂಡರಿ, 2 ಸಿಕ್ಸರ್)ಹಾಗೂ ಆಲ್ರೌಂಡರ್ ದೀಪಕ್ ಹೂಡಾ(50 ರನ್, 31 ಎಸೆತ)ಅರ್ಧಶತಕಗಳ ನೆರವಿನಿಂದ ಲಕ್ನೊ ಸೂಪರ್ ಜಯಂಟ್ಸ್ ತಂಡ ರಾಜಸ್ಥಾನ ರಾಯಲ್ಸ್ ತಂಡದ ಗೆಲುವಿಗೆ 197 ರನ್ ಗುರಿ ನಿಗದಿಪಡಿಸಿದೆ.
ಶನಿವಾರ ನಡೆದ ಐಪಿಎಲ್ನ 44ನೇ ಪಂದ್ಯದಲ್ಲಿ ಟಾಸ್ ಜಯಿಸಿದ ರಾಜಸ್ಥಾನ ತಂಡದ ನಾಯಕ ಸಂಜು ಸ್ಯಾಮ್ಸನ್ ಲಕ್ನೊ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು.
ಇನಿಂಗ್ಸ್ನ 3ನೇ ಎಸೆತದಲ್ಲಿ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್(8 ರನ್)ವಿಕೆಟನ್ನು ಕಳೆದುಕೊಂಡ ಲಕ್ನೊ ಕಳಪೆ ಆರಂಭ ಪಡೆದಿತ್ತು. ಮಾರ್ಕಸ್ ಸ್ಟೋಯಿನಿಸ್ ರನ್ ಖಾತೆ ತೆರೆಯುವ ಮೊದಲೇ ಸಂದೀಪ್ ಶರ್ಮಾಗೆ ಕ್ಲೀನ್ ಬೌಲ್ಡಾದರು. ಆಗ ಲಕ್ನೊದ ಸ್ಕೋರ್ 2ಕ್ಕೆ11.
ಸಂಕಷ್ಟದ ಸಮಯದಲ್ಲಿ ಜೊತೆಯಾದ ರಾಹುಲ್ ಹಾಗೂ ದೀಪಕ್ 3ನೇ ವಿಕೆಟ್ಗೆ 115 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಹೂಡಾ ವಿಕೆಟನ್ನು ಉರುಳಿಸಿದ ಆರ್.ಅಶ್ವಿನ್ (1-39) ಶತಕದ ಜೊತೆಯಾಟವನ್ನು ಮುರಿದರು. ಈ ಇಬ್ಬರು ಬೇರ್ಪಟ್ಟ ನಂತರ ಲಕ್ನೊ ತಂಡ ಉತ್ತಮ ಜೊತೆಯಾಟ ನಡೆಸಲಿಲ್ಲ.
ನಿಕೊಲಸ್ ಪೂರನ್(11 ರನ್, 11 ಎಸೆತ) ಬೇಗನೆ ಔಟಾದರು. ಅವೇಶ್ ಖಾನ್ 18ನೇ ಓವರ್ನಲ್ಲಿ ರಾಹುಲ್ಗೆ ಪೆವಿಲಿಯನ್ ಹಾದಿ ತೋರಿಸಿದರು.
ಆಯುಷ್ ಬದೋನಿ(ಔಟಾಗದೆ 18, 13 ಎಸೆತ)ಹಾಗೂ ಕೃನಾಲ್ ಪಾಂಡ್ಯ(ಔಟಾಗದೆ 15, 11 ಎಸೆತ) ಲಕ್ನೊದ ಸ್ಕೋರನ್ನು 200ರ ಗಡಿ ತಲುಪಿಸಿದರು.
ರಾಜಸ್ಥಾನದ ಪರ ಸಂದೀಪ್ ಶರ್ಮಾ(2-31) ಯಶಸ್ವಿ ಪ್ರದರ್ಶನ ನೀಡಿದರು. ಆರ್.ಅಶ್ವಿನ್, ಟ್ರೆಂಟ್ ಬೌಲ್ಟ್(1-41) ಹಾಗೂ ಅವೇಶ್ ಖಾನ್(1-42) ತಲಾ ಒಂದು ವಿಕೆಟ್ ಪಡೆದರು.
14 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ತನ್ನ ಪ್ರಾಬಲ್ಯ ಮುಂದುವರಿಸಲು ಬಯಸಿದ್ದು ತನ್ನ ಆಡುವ 11ರ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಸಂಕ್ಷಿಪ್ತ ಸ್ಕೋರ್
ಲಕ್ನೊ ಸೂಪರ್ ಜಯಂಟ್ಸ್: 20 ಓವರ್ಗಳಲ್ಲಿ 196/5
(ಕೆ.ಎಲ್.ರಾಹುಲ್ 76, ದೀಪಕ್ ಹೂಡಾ 50, ಆಯುಷ್ ಬದೋನಿ ಔಟಾಗದೆ 18, ಸಂದೀಪ್ ಶರ್ಮಾ 2-31)