ರಾಜಸ್ಥಾನದ ಬೌಲರ್ಗಳು ಪಂಜಾಬ್ ಬ್ಯಾಟಿಂಗ್ ಸರದಿಯನ್ನು ಮುರಿಯಬಲ್ಲರೇ?
ನಾಳೆ ರಾಜಸ್ಥಾನ ರಾಯಲ್ಸ್ vs ಪಂಜಾಬ್ ಕಿಂಗ್ಸ್

PC : PTI
ಮುಲ್ಲನ್ಪುರ (ಪಂಜಾಬ್): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮಹತ್ವದ ಪಂದ್ಯವೊಂದರಲ್ಲಿ ಶನಿವಾರ ರಾಜಸ್ಥಾನ ರಾಯಲ್ಸ್ ತಂಡವು ಉತ್ತಮ ಫಾರ್ಮ್ನಲ್ಲಿರುವ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ರಾಜಸ್ಥಾನ ರಾಯಲ್ಸ್ ನಾಯಕತ್ವವನ್ನು ಈಗ ಸಂಜು ಸ್ಯಾಮ್ಸನ್ ವಹಿಸಿಕೊಂಡಿದ್ದಾರೆ. ಆದರೆ, ಎಲ್ಲರ ಗಮನ ಇರುವುದು ಯಶಸ್ವಿ ಜೈಸ್ವಾಲ್ರ ನಿರ್ವಹಣೆಯ ಮೇಲೆ. ಕೆಲವು ವಾರಗಳಿಂದ ಜೈಸ್ವಾಲ್ ಗೊಂದಲದಲ್ಲಿದ್ದಾರೆ. ಅವರು ಇನ್ನು ದೇಶಿ ಕ್ರಿಕೆಟನ್ನು ಮುಂಬೈ ಬದಲು ಗೋವಾರ ಪರವಾಗಿ ಆಡಲು ನಿರ್ಧರಿಸಿದ್ದಾರೆ.
22 ವರ್ಷದ ಎಡಗೈ ದಾಂಡಿಗ ಈ ಐಪಿಎಲ್ ಋತುವಿನಲ್ಲಿ ಅವರು ಈವರೆಗೆ 1, 29 ಮತ್ತು 4 ರನ್ಗಳನ್ನು ಗಳಿಸಿದ್ದಾರೆ. ಅವರು ಇನ್ನು ರನ್ ಗಳಿಕೆಯ ಮೇಲೆ ಹೆಚ್ಚಿನ ಗಮನ ನೀಡಬೇಕಾಗಿದೆ.
ಉಸ್ತುವಾರಿ ನಾಯಕ ರಿಯಾನ್ ಪರಾಗ್ರ ಅಡಿಯಲ್ಲಿ ರಾಜಸ್ಥಾನ ರಾಯಲ್ಸ್ ಅಸ್ಥಿರ ಪ್ರದರ್ಶನವನ್ನು ನೀಡಿದೆ. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಿರು ಅಂತರದ ಜಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಅದು ಈವರೆಗೆ 3 ಪಂದ್ಯಗಳನ್ನು ಆಡಿದ್ದು, ಎರಡರಲ್ಲಿ ಸೋತಿದೆ.
ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟಿಂಗ್ ಸ್ಯಾಮ್ಸನ್ರನ್ನು ಬಲವಾಗಿ ಅವಲಂಬಿಸಿದೆ. ಶಿಮ್ರಾನ್ ಹೆಟ್ಮಯರ್ ಇನಿಂಗ್ಸ್ ಕೊನೆಯಲ್ಲಿ ರನ್ ಗಳಿಕೆಗೆ ವೇಗ ನೀಡುತ್ತಾರೆಂದು ನಿರೀಕ್ಷಿಸಲಾಗಿದೆ. ಆದರೆ, ದೊಡ್ಡ ಮೊತ್ತ ಗಳಿಸಲು ಅಥವಾ ದೊಡ್ಡ ಮೊತ್ತವನ್ನು ಬೆನ್ನತ್ತಲು ಜೈಸ್ವಾಲ್ ಮತ್ತು ಧ್ರುವ ಜೂರೆಲ್ರ ಫಾರ್ಮ್ ನಿರ್ಣಾಯಕವಾಗಿದೆ.
ಇನ್ನೊಂದೆಡೆ, ಶ್ರೇಯಸ್ ಅಯ್ಯರ್ರ ಸಮರ್ಥ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ಮುನ್ನುಗ್ಗುತ್ತಿದೆ. ಅಯ್ಯರ್ ಬೆನ್ನು ಬೆನ್ನಿಗೆ ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಅವರು ಈಗಾಗಲೇ ಎರಡು ಪಂದ್ಯಗಳಲ್ಲಿ 13 ಸಿಕ್ಸ್ಗಳನ್ನು ಬಾರಿಸಿದ್ದಾರೆ. ಇದು ಕಳೆದ ಇಡೀ ಋತುವಿನಲ್ಲಿ ಅವರು ಬಾರಿಸಿದ ಸಿಕ್ಸರ್ಗಳ ಸಂಖ್ಯೆಗೆ ಸಮವಾಗಿದೆ.
ಪಂಜಾಬ್ ಇದುವರೆಗೆ ತಾನಾಡಿದ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿದೆ.
ಅಯ್ಯರ್ರ ಪರಿಣಾಮಕಾರಿ ಫೀಲ್ಡಿಂಗ್ ಆಯೋಜನೆ ಮತ್ತು ಚಾಣಾಕ್ಷ ಬೌಲಿಂಗ್ ಬದಲಾವಣೆಗಳು ಗಮನ ಸೆಳೆದಿವೆ.
ಅದೇ ವೇಳೆ, ಜೋಫ್ರಾ ಆರ್ಚರ್, ಮಹೀಶ್ ತೀಕ್ಷಣ, ವನಿಂಡು ಹಸರಂಗ ಮತ್ತು ತುಷಾರ್ ದೇಶಪಾಂಡೆಯನ್ನು ಒಳಗೊಂಡ ರಾಜಸ್ತಾನದ ಬೌಲಿಂಗ್ ದಾಳಿ ಮಾರಕವಲ್ಲದಿದ್ದರೂ, ಉತ್ತಮವಾಗಿದೆ.
ಸ್ಥಳ: ಮುಲ್ಲನ್ಪುರ (ಪಂಜಾಬ್)
ಸಮಯ: ರಾತ್ರಿ 7:30