ರಣಜಿ | 26 ವರ್ಷಗಳ ನಂತರ ಮೊದಲ ಬಾರಿ ಮುಂಬೈಗೆ ಸೋಲುಣಿಸಿದ ಬರೋಡಾ
ಭಾರ್ಗವ್ ಭಟ್ ಭರ್ಜರಿ ಬೌಲಿಂಗ್ ಗೆ ತತ್ತರಿಸಿದ ಹಾಲಿ ರಣಜಿ ಚಾಂಪಿಯನ್
PC : X
ವಡೋದರ : ಎಡಗೈ ಸ್ಪಿನ್ನರ್ ಭಾರ್ಗವ್ ಭಟ್(6-55) ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಗಳಿಸಿದ 18ನೇ ಐದು ವಿಕೆಟ್ ಗೊಂಚಲು ನೆರವಿನಿಂದ ಬರೋಡಾ ಕ್ರಿಕೆಟ್ ತಂಡ ಹಾಲಿ ರಣಜಿ ಚಾಂಪಿಯನ್ ಮುಂಬೈ ತಂಡವನ್ನು 84 ರನ್ ಅಂತರದಿಂದ ಮಣಿಸಿದೆ. ಈ ಮೂಲಕ ರಣಜಿ ಟ್ರೋಫಿಯಲ್ಲಿ ಅಪರೂಪದ ಗೆಲುವು ದಾಖಲಿಸಿದೆ.
ಉಭಯ ತಂಡಗಳು ಈ ತನಕ 66 ಪಂದ್ಯಗಳಲ್ಲಿ ಸೆಣಸಾಡಿದ್ದು, ಬರೋಡಾ ತಂಡ ಕೇವಲ 4 ಬಾರಿ ಮುಂಬೈ ತಂಡವನ್ನು ಮಣಿಸಿದೆ. 1998-99ರಲ್ಲಿ ಕೊನೆಯ ಬಾರಿ ಮುಂಬೈ ತಂಡಕ್ಕೆ ಸೋಲುಣಿಸಿತ್ತು.
ವಡೋದರ ಇಂಟರ್ನ್ಯಾಶನಲ್ ಕ್ರಿಕೆಟ್ ಅಕಾಡಮಿಯಲ್ಲಿ ಇತಿಹಾಸ ಮರುಕಳಿಸಿದ್ದು, ಭಟ್ 2ನೇ ಇನಿಂಗ್ಸ್ನಲ್ಲಿ 55 ರನ್ಗೆ 6 ವಿಕೆಟ್ಗಳನ್ನು ಉರುಳಿಸಿ ಬರೋಡಾ ತಂಡ ಈ ಸಾಲಿನ ರಣಜಿಯಲ್ಲಿ ಗೆಲುವಿನ ಆರಂಭ ಪಡೆಯಲು ನೆರವಾದರು.
ಗೆಲ್ಲಲು 262 ರನ್ ಗುರಿ ಪಡೆದಿದ್ದ 42 ಬಾರಿಯ ರಣಜಿ ಚಾಂಪಿಯನ್ ಮುಂಬೈ ಕ್ರಿಕೆಟ್ ತಂಡಕ್ಕೆ 4ನೇ ದಿನವಾದ ಸೋಮವಾರ ಗೆಲ್ಲಲು 8 ವಿಕೆಟ್ ನೆರವಿನಿಂದ 220 ರನ್ ಅಗತ್ಯವಿತ್ತು. ವಿರೂಪಗೊಂಡ ಪಿಚ್ನಲ್ಲಿ ಕಠಿಣ ಸವಾಲು ಎದುರಿಸಿದ ಮುಂಬೈ ತನ್ನ 2ನೇ ಇನಿಂಗ್ಸ್ನಲ್ಲಿ ಕೇವಲ 177 ರನ್ ಗಳಿಸಿ ಆಲೌಟಾಯಿತು.
ಬರೋಡಾದ ಮೇಲೆ ಒತ್ತಡ ಹೇರಲು ಮುಂಬೈ ತಂಡದ ನಾಯಕ ಅಜಿಂಕ್ಯ ರಹಾನೆ ಕ್ರೀಸ್ನಲ್ಲಿ ಗಟ್ಟಿಯಾಗಿ ನಿಲ್ಲಬೇಕಾಗಿತ್ತು. ದಿನದ 4ನೇ ಓವರ್ನಲ್ಲಿ ಭಟ್ ಅವರು ರಹಾನೆ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದರು. 4 ಓವರ್ಗಳ ನಂತರ ಆರಂಭಿಕ ಆಟಗಾರ ಆಯೂಷ್ ಮ್ಹಾತ್ರೆ ವಿಕೆಟನ್ನು ಉರುಳಿಸಿದರು.
ಮುಂಬೈ ತಂಡ 63 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡಿದ್ದಾಗ ಆಕ್ರಮಣಕಾರಿ ಆಟವಾಡಿದ ಶ್ರೇಯಸ್ ಅಯ್ಯರ್ (30 ರನ್, 37 ಎಸೆತ) ಗೆಲುವಿನ ವಿಶ್ವಾಸ ಮೂಡಿಸಿದರು. ಭಟ್ ಅವರು ಅಯ್ಯರ್ಗೆ ಪೆವಿಲಿಯನ್ ಹಾದಿ ತೋರಿಸಿದರು. ಅಯ್ಯರ್ ಔಟಾಗುವುದರೊಂದಿಗೆ ಪಂದ್ಯವು ಮುಂಬೈ ತಂಡದ ಕೈಜಾರಿತು. ಮುಂಬೈ ತಂಡದ ಖ್ಯಾತ ಆಲ್ರೌಂಡರ್ಗಳಾದ ಶಮ್ಸ್ ಮುಲಾನಿ(12 ರನ್), ಶಾರ್ದೂಲ್ ಠಾಕೂರ್(8 ರನ್) ಹಾಗೂ ತನುಷ್ ಕೋಟ್ಯಾನ್ (1ರನ್)ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ.
ನಾಲ್ಕೂವರೆ ವರ್ಷಗಳ ನಂತರ ಮುಂಬೈ ತಂಡಕ್ಕೆ ವಾಪಸಾಗಿರುವ ಸಿದ್ದೇಶ್ ಲಾಡ್(59 ರನ್, 94 ಎಸೆತ) ಅರ್ಧಶತಕ ಗಳಿಸಿ ತಕ್ಕಮಟ್ಟಿಗೆ ಹೋರಾಟ ನೀಡಿದರು.
ಲಾಡ್ ನೀಡಿದ ರಿಟರ್ನ್ ಕ್ಯಾಚ್ ಪಡೆಯುವ ಮೂಲಕ ಭಟ್ ಅವರು ಮುಂಬೈ ಇನಿಂಗ್ಸ್ಗೆ ತೆರೆ ಎಳೆದರು.
ಭಟ್ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 53 ರನ್ಗೆ 4 ವಿಕೆಟ್ಗಳನ್ನು ಪಡೆದಿದ್ದರು. ಪಂದ್ಯದಲ್ಲಿ 108 ರನ್ ನೀಡಿ 10 ವಿಕೆಟ್ ಗೊಂಚಲು ಪಡೆದರು. ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಭಾರ್ಗವ್ ಭಟ್ ದೇಶೀಯ ಕ್ರಿಕೆಟ್ನ ಬಲಿಷ್ಠ ತಂಡವಾಗಿರುವ ಮುಂಬೈ ವಿರುದ್ಧ ಸತತ ಎರಡನೇ ಬಾರಿ 10 ವಿಕೆಟ್ ಗೊಂಚಲು ಪಡೆದರು. ಭಟ್ ಅವರು ಮುಂಬೈ ವಿರುದ್ಧ ಈ ವರ್ಷ ಆಡಿರುವ ಎರಡು ರಣಜಿ ಪಂದ್ಯಗಳಲ್ಲಿ ಮೂರು ಬಾರಿ ಐದು ವಿಕೆಟ್ ಗೊಂಚಲು ಸಹಿತ ಒಟ್ಟು 24 ವಿಕೆಟ್ಗಳನ್ನು ಪಡೆದಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಮುಂಬೈನಲ್ಲಿ ನಡೆದಿದ್ದ ಮುಂಬೈ ವಿರುದ್ಧದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 34ರ ಹರೆಯದ ಭಟ್ ಪ್ರತಿ ಇನಿಂಗ್ಸ್ನಲ್ಲಿ ಏಳು ವಿಕೆಟ್ಗಳನ್ನು(7-112, 7-200)ಪಡೆದಿದ್ದರು. ಆದರೆ ಮುಶೀರ್ ಖಾನ್ ದ್ವಿಶತಕ ಸಿಡಿಸಿದ ಕಾರಣ ಬರೋಡಾ ತಂಡ ಸೋಲುಂಡಿತ್ತು.
►ಸಂಕ್ಷಿಪ್ತ ಸ್ಕೋರ್
ಬರೋಡಾ ಮೊದಲ ಇನಿಂಗ್ಸ್: 290 ರನ್
ಮುಂಬೈ ಮೊದಲ ಇನಿಂಗ್ಸ್: 214 ರನ್
ಬರೋಡಾ ಎರಡನೇ ಇನಿಂಗ್ಸ್: 185
ಮುಂಬೈ ಎರಡನೇ ಇನಿಂಗ್ಸ್: 177
(ಸಿದ್ದೇಶ್ ಲಾಡ್ 59, ಶ್ರೇಯಸ್ ಅಯ್ಯರ್ 30, ಭಾರ್ಗವ್ ಭಟ್ 6-55)
ಪಂದ್ಯಶ್ರೇಷ್ಠ : ಭಾರ್ಗವ್ ಭಟ್