ರಣಜಿ: ಕರ್ನಾಟಕ ವಿರುದ್ದ ಪಂಜಾಬ್ 55 ರನ್ಗೆ ಆಲೌಟ್
ವಾಸುಕಿ ಕೌಶಿಕ್, ಅಭಿಲಾಶ್ ಶೆಟ್ಟಿ ಅಮೋಘ ಬೌಲಿಂಗ್

ಶುಭಮನ್ ಗಿಲ್ | PC : X
ಬೆಂಗಳೂರು: ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಕರಾರುವಾಕ್ ಬೌಲಿಂಗ್ ಮಾಡಿದ ಕರ್ನಾಟಕದ ವೇಗದ ಬೌಲರ್ಗಳಾದ ವಾಸುಕಿ ಕೌಶಿಕ್(4-16) ಹಾಗೂ ಅಭಿಲಾಶ್ ಶೆಟ್ಟಿ(3-19)ಪಂಜಾಬ್ ಕ್ರಿಕೆಟ್ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ ಕೇವಲ 55 ರನ್ಗೆ ಕಟ್ಟಿ ಹಾಕುವಲ್ಲಿ ನೆರವಾದರು.
ತನ್ನ ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡವು 4 ವಿಕೆಟ್ಗಳ ನಷ್ಟಕ್ಕೆ 199 ರನ್ ಗಳಿಸಿದ್ದು, 144 ರನ್ ಮುನ್ನಡೆಯಲ್ಲಿದೆ.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಜಯಿಸಿದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಪಂಜಾಬ್ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು.
ಪಂಜಾಬ್ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಣಜಿ ಇತಿಹಾಸದಲ್ಲಿ 2ನೇ ಕನಿಷ್ಠ ಮೊತ್ತ ಗಳಿಸಿತು. 2015ರಲ್ಲಿ ಮುಂಬೈ ತಂಡವು 44 ರನ್ ಗಳಿಸಿತ್ತು.
ಶುಭಮನ್ ಗಿಲ್ ನಾಯಕತ್ವದ ಪಂಜಾಬ್ ತಂಡವು ಯಾವ ಹಂತದಲ್ಲೂ ಹೋರಾಟವನ್ನು ನೀಡದೆ ಪೆವಿಲಿಯನ್ಗೆ ಪರೇಡ್ ನಡೆಸಿತು. ಆರಂಭಿಕ ಆಟಗಾರನಾಗಿ ಮೈದಾನಕ್ಕಿಳಿದ ಗಿಲ್(4 ರನ್) ಮೊದಲಿಗೆ ವಿಕೆಟ್ ಒಪ್ಪಿಸಿದರು. ಉಳಿದ ಆಟಗಾರರು ಗಿಲ್ರನ್ನು ಅನುಸರಿಸಿದರು. ಪಂಜಾಬ್ ಪರ ರಮಣ್ದೀಪ್ ಸಿಂಗ್(16 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.
ಎಡಗೈ ವೇಗಿ ಅಭಿಲಾಶ್(3-19)ಶುಭಮನ್ ಗಿಲ್ ವಿಕೆಟನ್ನು ಉರುಳಿಸಿ ಪಂಜಾಬ್ ಬ್ಯಾಟಿಂಗ್ ಪತನಕ್ಕೆ ನಾಂದಿ ಹಾಡಿದರು. 7ನೇ ಓವರ್ನಲ್ಲಿ ಕೌಶಿಕ್ 2 ವಿಕೆಟ್ಗಳನ್ನು ಉರುಳಿಸಿ ಪಂಜಾಬ್ಗೆ ಶಾಕ್ ನೀಡಿದರು. ಪ್ರಸಿದ್ಧ ಕೃಷ್ಣ(2-11)ಹಾಗೂ ಕೌಶಿಕ್ (4-16) ಪಂಜಾಬ್ನ ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟರ್ಗಳನ್ನು ಇನ್ನಿಲ್ಲದಂತೆ ಕಾಡಿದರು.
ಬ್ಯಾಟಿಂಗ್ ಆರಂಭಿಸಿರುವ ಕರ್ನಾಟಕದ ಪರ ಯುವ ಬ್ಯಾಟರ್ ಆರ್.ಸ್ಮರಣ್(ಔಟಾಗದೆ 83, 100 ಎಸೆತ, 12 ಬೌಂಡರಿ, 1 ಸಿಕ್ಸರ್)ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಚೊಚ್ಚಲ ಅರ್ಧಶತಕ ಗಳಿಸಿದರು.
ತನ್ನ ಮೊದಲ ಪ್ರಥಮ ದರ್ಜೆ ಋತುವಿನ ಮೊದಲಾರ್ಧದ 7 ಇನಿಂಗ್ಸ್ಗಳಲ್ಲಿ ಕೇವಲ 145 ರನ್ ಗಳಿಸಿದ್ದ ಎಡಗೈ ಬ್ಯಾಟರ್ ಸ್ಮರಣ್ ಸದ್ಯ ಉತ್ತಮ ಫಾರ್ಮ್ನಲ್ಲಿದ್ದು, ಕರ್ನಾಟಕ ತಂಡ ಇತ್ತೀಚೆಗೆ ವಿಜಯ್ ಹಝಾರೆ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕರ್ನಾಟಕ ತಂಡ 111 ರನ್ಗೆ ಅಗ್ರ 3 ವಿಕೆಟ್ಗಳನ್ನು ಬೇಗನೆ ಕಳೆದುಕೊಂಡಾಗ ಸ್ಮರಣ್ ಹಾಗೂ ಶ್ರೀಜಿತ್ 4ನೇ ವಿಕೆಟ್ಗೆ 81 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಕೆ.ವಿ. ಅನೀಶ್(33 ರನ್), ದೇವದತ್ತ ಪಡಿಕ್ಕಲ್(27 ರನ್), ಕೆ.ಶ್ರೀಜಿತ್(26 ರನ್)ಹಾಗೂ ನಾಯಕ ಅಗರ್ವಾಲ್(20 ರನ್)ಉತ್ತಮ ಆರಂಭ ಪಡೆದರೂ ಮೊತ್ತ ಗಳಿಸಲು ವಿಫಲರಾದರು.
ಗುರುವಾರ ಪುನರಾಂಭಗೊಂಡಿರುವ ರಣಜಿ ಪಂದ್ಯದಲ್ಲಿ ಆಡಿರುವ ಟೀಮ್ ಇಂಡಿಯಾದ ಆಟಗಾರರಲ್ಲಿ ರೋಹಿತ್ ಶರ್ಮಾ ಮುಂಬೈ ಪರ 2 ರನ್,ಪಂಜಾಬ್ ಪರ ಗಿಲ್ 4 ಹಾಗೂ ದಿಲ್ಲಿ ಪರ ಪಂತ್ ಕೇವಲ 1 ರನ್ ಗಳಿಸಿದರು. ರವೀಂದ್ರ ಜಡೇಜ ಮಾತ್ರ 5 ವಿಕೆಟ್ ಪಡೆದು ಮಿಂಚಿದ್ದಾರೆ.