ರಣಜಿ ಸೆಮಿ ಫೈನಲ್ | ಯಶ್ ರಾಥೋಡ್ ಅರ್ಧಶತಕ ; ಮಧ್ಯಪ್ರದೇಶ ವಿರುದ್ಧ ವಿದರ್ಭ ಪ್ರತಿ ಹೋರಾಟ
ನಾಗ್ಪುರ: ಮಧ್ಯಮ ಸರದಿಯ ಬ್ಯಾಟರ್ ಯಶ್ ರಾಥೋಡ್ ಅಜೇಯ 97 ರನ್ (165 ಎಸೆತ, 12 ಬೌಂಡರಿ) ನೆರವಿನಿಂದ ಪ್ರತಿ ಹೋರಾಟ ನೀಡುತ್ತಿರುವ ವಿದರ್ಭ ಕ್ರಿಕೆಟ್ ತಂಡ ಮಧ್ಯಪ್ರದೇಶ ವಿರುದ್ಧ ರಣಜಿ ಟ್ರೋಫಿಯ ಮೊದಲ ಸೆಮಿ ಫೈನಲ್ ನಲ್ಲಿ ತನ್ನ ಎರಡನೇ ಇನಿಂಗ್ಸ್ ನಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 343 ರನ್ ಗಳಿಸಿದೆ.
165 ಎಸೆತಗಳನ್ನು ಎದುರಿಸಿದ ರಾಥೋಡ್ ಗೆ ನಾಯಕ ಅಕ್ಷಯ್ ವಾಡ್ಕರ್(77 ರನ್, 139 ಎಸೆತ, 8 ಬೌಂಡರಿ)ಸಮರ್ಥ ಸಾಥ್ ನೀಡಿದರು. ಈ ಜೋಡಿ ಆರನೇ ವಿಕೆಟ್ ಗೆ 158 ರನ್ ಜೊತೆಯಾಟ ನಡೆಸಿದೆ. 161 ರನ್ ಗೆ 5 ವಿಕೆಟ್ ಗಳನ್ನು ಕಳೆದುಕೊಂಡಿದ್ದ ವಿದರ್ಭ ತಂಡಕ್ಕೆ ಚೇತರಿಸಿಕೊಳ್ಳಲು ಈ ಜೊತೆಯಾಟ ನಿರ್ಣಾಯಕವಾಯಿತು.
3ನೇ ದಿನವಾದ ಸೋಮವಾರ ವಿದರ್ಭ ತಂಡ 1 ವಿಕೆಟ್ ನಷ್ಟಕ್ಕೆ 13 ರನ್ನಿಂದ ಇನಿಂಗ್ಸ್ ಮುಂದುವರಿಸಿತು. ನೈಟ್ ವಾಚ್ಮ್ಯಾಚ್ ಅಕ್ಷಯ್ ವಾಖರೆ(1 ರನ್) ವಿಕೆಟನ್ನು ಬೇಗನೆ ಕಳೆದುಕೊಂಡಿತು.
90 ರನ್ ಗೆ 3 ವಿಕೆಟ್ ಗಳನ್ನು ಕಳೆದುಕೊಂಡಿದ್ದ ವಿದರ್ಭ ತಂಡ ಅಮನ್ ಮೊಖಡೆ ಹಾಗೂ ಕರುಣ್ ನಾಯರ್(38 ರನ್)ವಿಕೆಟ್ ಒಪ್ಪಿಸಿದಾಗ 161 ರನ್ ಗೆ 5ನೇ ವಿಕೆಟ್ ಕಳೆದುಕೊಂಡಿತು. ಕೇವಲ 79 ರನ್ ಮುನ್ನಡೆಯಲ್ಲಿತ್ತು.
ಕೇವಲ 7ನೇ ಪ್ರಥಮ ದರ್ಜೆ ಪಂದ್ಯವನ್ನಾಡುತ್ತಿರುವ ರಾಥೋಡ್ ಅವರು ವಾಡ್ಕರ್ ಜೊತೆಗೂಡಿ ಮಧ್ಯಪ್ರದೇಶದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿ ಇನಿಂಗ್ಸ್ ಕಟ್ಟಿದರು. ಮೊದಲೆರಡು ದಿನಗಳಿಗಿಂತ 3ನೇ ದಿನದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿತ್ತು. ರಾಥೋಡ್ ಹಾಗೂ ವಾಡ್ಕರ್ ಸನ್ನಿವೇಶದ ಲಾಭ ಪಡೆದು ರನ್ ರಾಶಿ ಹಾಕಿದರು.
ವಾಡ್ಕರ್ ದಿನದಾಟದಂತ್ಯಕ್ಕೆ ವೇಗದ ಬೌಲರ್ ಅನುಭವ್ ಅಗರ್ವಾಲ್ ಗೆ ವಿಕೆಟ್ ಒಪ್ಪಿಸಿದರು.