ರಣಜಿ ಟ್ರೋಫಿ | 5ನೇ ಅತಿ ವೇಗದ ಶತಕ ಗಳಿಸಿದ ರಜತ್ ಪಾಟೀದಾರ್
ರಜತ್ ಪಾಟೀದಾರ್ | PC : X
ಇಂದೋರ್ : ಮಧ್ಯಪ್ರದೇಶದ ಬ್ಯಾಟರ್ ರಜತ್ ಪಾಟೀದಾರ್ ಮಂಗಳವಾರ ರಣಜಿ ಟ್ರೋಫಿ ಇತಿಹಾಸದಲ್ಲಿ ಐದನೇ ಅತಿ ವೇಗದ ಶತಕ ಗಳಿಸಿದ್ದಾರೆ.
ಹರ್ಯಾಣ ವಿರುದ್ಧದ ಎಲಿಟ್ ಗ್ರೂಪ್ ಸಿ ಪಂದ್ಯದಲ್ಲಿ ಅವರು ಕೇವಲ 68 ಎಸೆತಗಳಲ್ಲಿ ಶತಕ ಸಿಡಿಸಿದರು.
ಇಂದೋರ್ ನ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಪಾಟೀದಾರ್ ಸಿಡಿಸಿದ ಶತಕವು ಅವರನ್ನು ದಾಖಲೆ ಪುಸ್ತಕಕ್ಕೆ ಸೇರಿಸಿದ್ದು ಮಾತ್ರವಲ್ಲ, ತಂಡದ ಅವಕಾಶಗಳನ್ನೂ ಹಿಗ್ಗಿಸಿತು.
ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಪಾಟೀದಾರ್, ರಣಜಿ ಪಂದ್ಯಗಳಲ್ಲಿ ಮಧ್ಯಪ್ರದೇಶದ ಬ್ಯಾಟರ್ ಒಬ್ಬನ ದಾಖಲೆಯನ್ನು ಮುರಿದರು. ಅವರು ಕರ್ನಾಟಕದ ವಿರುದ್ಧ ನಮನ್ ಓಝ ಬಾರಿಸಿದ್ದ 69 ಎಸೆತಗಳ ಶತಕವನ್ನು ಹಿಂದಿಕ್ಕಿದರು. ರಣಜಿ ಟ್ರೋಫಿಯ ಸಾರ್ವಕಾಲಿಕ ದಾಖಲೆ ರಿಶಬ್ ಪಂತ್ರ ಹೆಸರಿನಲ್ಲಿದೆ. ಅವರು 2016ರಲ್ಲಿ, ಜಾರ್ಖಂಡ್ ವಿರುದ್ಧ 48 ಎಸೆತಗಳಲ್ಲಿ ಶತಕ ಸಿಡಿಸಿದ್ದರು.
ಮಧ್ಯಪ್ರದೇಶವು ಮೊದಲ ಇನಿಂಗ್ಸ್ನಲ್ಲಿ 308 ರನ್ ಗಳನ್ನು ಗಳಿಸಿದ್ದರೆ, ಹರ್ಯಾಣವು 440 ರನ್ ಗಳನ್ನು ಕಲೆಹಾಕಿತ್ತು. ಆ ಮೂಲಕ ಹರ್ಯಾಣವು 132 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತ್ತು.
ಮಧ್ಯಪ್ರದೇಶವು ತನ್ನ ದ್ವಿತೀಯ ಇನಿಂಗ್ಸನ್ನು 4 ವಿಕೆಟ್ ಗಳ ನಷ್ಟಕ್ಕೆ 308 ರನ್ಗೆ ಡಿಕ್ಲೇರ್ ಮಾಡಿತು ಮತ್ತು ಹರ್ಯಾಣ ಗೆಲುವಿಗೆ 177 ರನ್ ಗಳ ಗುರಿ ನಿಗದಿಪಡಿಸಿತು.
ನಾಲ್ಕು ದಿನಗಳ ಪಂದ್ಯ ಮುಗಿದಾಗ ಹರ್ಯಾಣಕ್ಕೆ 3 ವಿಕೆಟ್ ಗಳ ನಷ್ಟಕ್ಕೆ 115 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು. ಇದರೊಂದಿಗೆ ಪಂದ್ಯ ಡ್ರಾಗೊಂಡಿತು.
ಹರ್ಯಾಣದ ಹರ್ಶಲ್ ಪಟೇಲ್ ಪಂದ್ಯಶ್ರೇಷ್ಠರಾದರು.