ರಣಜಿ ಟ್ರೋಫಿ: ಪಂಜಾಬ್ ವಿರುದ್ಧ ಕರ್ನಾಟಕ ತಂಡಕ್ಕೆ ಇನಿಂಗ್ಸ್ ಜಯ
ಶುಭಮನ್ ಗಿಲ್ ಶತಕ ವ್ಯರ್ಥ

ಶುಭಮನ್ ಗಿಲ್ | PC : PTI
ಬೆಂಗಳೂರು: ಪಂಜಾಬ್ ನಾಯಕ ಹಾಗೂ ಆರಂಭಿಕ ಬ್ಯಾಟರ್ ಶುಭಮನ್ ಗಿಲ್ 102 ರನ್ ಗಳಿಸಿದ್ದರೂ ರಣಜಿ ಟ್ರೋಫಿ ‘ಸಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ ತಂಡದ ವಿರುದ್ಧ ತನ್ನ ತಂಡವು ಇನಿಂಗ್ಸ್ ಅಂತರದಿಂದ ಸೋಲುವುದನ್ನು ತಪ್ಪಿಸುವಲ್ಲಿ ವಿಫಲರಾದರು.
ಮೂರನೇ ದಿನವಾದ ಶನಿವಾರ 7 ರನ್ನಿಂದ ತನ್ನ ಬ್ಯಾಟಿಂಗ್ ಮುಂದುವರಿಸಿದ ಗಿಲ್ ನಿನ್ನೆಯ ಮೊತ್ತಕ್ಕೆ ಇನ್ನೂ 95 ರನ್ ಸೇರಿಸಿದರು. ತನ್ನ 171 ಎಸೆತಗಳ ಇನಿಂಗ್ಸ್ನಲ್ಲಿ 14 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 102 ರನ್ ಗಳಿಸಿದರು. ಮೊದಲ ಅರ್ಧಶತಕ ಗಳಿಸಲು 119 ಎಸೆತಗಳನ್ನು ಎದುರಿಸಿದ ಗಿಲ್ ಆನಂತರ ಕೇವಲ 40 ಎಸೆತಗಳಲ್ಲಿ 50 ರನ್ ತಲುಪಿದರು.
ಮೊದಲ ಇನಿಂಗ್ಸ್ನಲ್ಲಿ 420 ರನ್ ಹಿನ್ನಡೆ ಕಂಡಿರುವ ಪಂಜಾಬ್ ತಂಡ 2ನೇ ದಿನದಾಟದಂತ್ಯಕ್ಕೆ ತನ್ನ ಎರಡನೇ ಇನಿಂಗ್ಸ್ನಲ್ಲಿ 24 ರನ್ಗೆ 2 ವಿಕೆಟ್ಗಳನ್ನು ಕಳೆದುಕೊಂಡಿತ್ತು.
ಇಂದು ಬ್ಯಾಟಿಂಗ್ ಮುಂದುವರಿಸಿದ ಪಂಜಾಬ್ ತಂಡವು ತನ್ನ 2ನೇ ಇನಿಂಗ್ಸ್ನಲ್ಲಿ 63.4 ಓವರ್ಗಳಲ್ಲಿ 213 ರನ್ಗೆ ಆಲೌಟಾಯಿತು. ಇನಿಂಗ್ಸ್ ಹಾಗೂ 207 ರನ್ ಅಂತರದಿಂದ ಹೀನಾಯವಾಗಿ ಸೋಲುಂಡಿತು.
ಪಂಜಾಬ್ ತನ್ನ ಮೊದಲ ಇನಿಂಗ್ಸ್ನಲ್ಲಿ ಕೇವಲ 55 ರನ್ ಗಳಿಸಿದ್ದು, ಗಿಲ್ 4 ರನ್ ಕೊಡುಗೆ ನೀಡಿದ್ದರು.
ರವಿಚಂದ್ರನ್ ಸ್ಮರಣ್ ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಗಳಿಸಿದ ಚೊಚ್ಚಲ ದ್ವಿಶತಕದ ನೆರವಿನಿಂದ ಕರ್ನಾಟಕ ತಂಡವು ತನ್ನ ಮೊದಲ ಇನಿಂಗ್ಸ್ನಲ್ಲಿ 122.1 ಓವರ್ಗಳಲ್ಲಿ 475 ರನ್ ಕಲೆ ಹಾಕಿತ್ತು. ಸ್ಮರಣ್ ‘ಪಂದ್ಯಶ್ರೇಷ್ಠ’ಪ್ರಶಸ್ತಿಗೆ ಭಾಜನರಾದರು.
ಭರ್ಜರಿ ಜಯ ದಾಖಲಿಸಿರುವ ಕರ್ನಾಟಕ ತಂಡವು ಬೋನಸ್ ಅಂಕದೊಂದಿಗೆ 7 ಪಾಯಿಂಟ್ಸ್ ಗಳಿಸಿದೆ.
2ನೇ ಇನಿಂಗ್ಸ್ನಲ್ಲಿ ಕರ್ನಾಟಕದ ಪರ ವೇಗದ ಬೌಲರ್ ಯಶೋವರ್ಧನ್(3-37) ಹಾಗೂ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್(3-19) ಮಿಂಚಿದರು. ಈ ಇಬ್ಬರು ತಲಾ 3 ವಿಕೆಟ್ಗಳನ್ನು ಉರುಳಿಸಿ ಗೆಲುವಿಗೆ ನೆರವಾದರು. ಪ್ರಸಿದ್ಧ ಕೃಷ್ಣ (2-57)ಎರಡು ವಿಕೆಟ್ ಪಡೆದರು.
ಇತ್ತೀಚೆಗೆ ಕೊನೆಗೊಂಡಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯದ ವಿರುದ್ಧ ರನ್ ಬರ ಎದುರಿಸಿದ್ದ ಗಿಲ್ ಇದೀಗ ಶತಕ ಗಳಿಸಿ ಮಿಂಚಿದರು.
25ರ ಹರೆಯದ ಗಿಲ್ ಆಸ್ಟ್ರೇಲಿಯದಲ್ಲಿ 3 ಟೆಸ್ಟ್ ಪಂದ್ಯಗಳ 5 ಇನಿಂಗ್ಸ್ಗಳಲ್ಲಿ ಕೇವಲ 93 ರನ್ ಗಳಿಸಿದ್ದಾರೆ.