ರಣಜಿ ಟ್ರೋಫಿ | ಗುಜರಾತ್, ವಿದರ್ಭ, ಮುಂಬೈ ಸೆಮಿ ಫೈನಲ್ಗೆ ತೇರ್ಗಡೆ

PC : X
ಹೊಸದಿಲ್ಲಿ: ಗುಜರಾತ್, ವಿದರ್ಭ ಹಾಗೂ ಮುಂಬೈ ತಂಡಗಳು 2024-25ರ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿ ಫೈನಲ್ಗೆ ತೇರ್ಗಡೆಯಾಗಿವೆ.
ಸೌರಾಷ್ಟ್ರ ತಂಡವನ್ನು ಮಂಗಳವಾರ ಇನಿಂಗ್ಸ್ ಹಾಗೂ 98 ರನ್ ಅಂತರದಿಂದ ಮಣಿಸಿರುವ ಗುಜರಾತ್ ತಂಡ ಸೆಮಿ ಫೈನಲ್ಗೆ ಪ್ರವೇಶಿಸಿದೆ.
ವೇಗದ ಬೌಲರ್ಗಳಾದ ಪ್ರಿಯಾಜಿತ್ ಜಡೇಜ(4-32) ಹಾಗೂ ಅರ್ಝಾನ್(3-54) ನೇತೃತ್ವದಲ್ಲಿ ಸೌರಾಷ್ಟ್ರ ತಂಡವನ್ನು ಗುಜರಾತ್ 2ನೇ ಇನಿಂಗ್ಸ್ನಲ್ಲಿ 197 ರನ್ಗೆ ನಿಯಂತ್ರಿಸಿ 4ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿತು.
4ನೇ ದಿನದಾಟವಾದ ಮಂಗಳವಾರ ವಿಕೆಟ್ ನಷ್ಟವಿಲ್ಲದೆ 33 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಸೌರಾಷ್ಟ್ರ ತಂಡವು ಬಲಗೈ ವೇಗಿ ಜಡೇಜ ಹಾಗೂ ಎಡಗೈ ಸ್ಪಿನ್ನರ್ ಅರ್ಝಾನ್ ದಾಳಿಗೆ ತತ್ತರಿಸಿ ಸೋಲೊಪ್ಪಿಕೊಂಡಿತು.
ಮೊದಲ ವಿಕೆಟ್ಗೆ 67 ರನ್ ಜೊತೆಯಾಟ ನಡೆಸಿದ ಚಿರಾಜ್ ಜಾನಿ(26 ರನ್)ವಿಕೆಟನ್ನು ಕಬಳಿಸಿದ ಜಡೇಜ ಗುಜರಾತ್ಗೆ ಆರಂಭಿಕ ಮೇಲುಗೈ ಒದಗಿಸಿದರು. ಆನಂತರ ಭಾರತದ ಹಿರಿಯ ಬ್ಯಾಟರ್ ಚೇತೇಶ್ವರ ಪೂಜಾರರನ್ನು ಕೇವಲ 2 ರನ್ಗೆ ಔಟ್ ಮಾಡಿದರು.
ಆರಂಭಿಕ ಬ್ಯಾಟರ್ ಹಾರ್ವಿಕ್ ದೇಸಾಯಿ 9 ಬೌಂಡರಿಗಳ ನೆರವಿನಿಂದ ಹೋರಾಟಕಾರಿ ಇನಿಂಗ್ಸ್(54 ರನ್)ಆಡಿದ ಹೊರತಾಗಿಯೂ ಸೌರಾಷ್ಟ್ರ ಉತ್ತಮ ಜೊತೆಯಾಟ ನಡೆಸುವಲ್ಲಿ ವಿಫಲವಾಯಿತು.
ಭಾರತದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ(2-30) ಹಿರಿಯ ಬ್ಯಾಟರ್ ಶೆಲ್ಡನ್ ಜಾಕ್ಸನ್(27ರನ್)ವಿಕೆಟ್ ಕಬಳಿಸಿದರು.
ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ಸೌರಾಷ್ಟ್ರ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 216 ರನ್ ಗಳಿಸಿ ಆಲೌಟಾಯಿತು. ಗುಜರಾತ್ ತಂಡ ತನ್ನ ಮೊದಲ ಇನಿಂಗ್ಸ್ನಲ್ಲಿ 511 ರನ್ ಗಳಿಸಿ ಇನಿಂಗ್ಸ್ ಮುನ್ನಡೆ ಸಾಧಿಸಿತು. ತನ್ನ 2ನೇ ಇನಿಂಗ್ಸ್ನಲ್ಲೂ ಕಳಪೆ ಪ್ರದರ್ಶನ ನೀಡಿದ ಸೌರಾಷ್ಟ್ರ ತಂಡವು 197 ರನ್ಗೆ ಆಲೌಟಾಯಿತು.
ಶತಕ(103)ಹಾಗೂ ಎರಡು ವಿಕೆಟ್ ಪಡೆದ ಜಯಮೀತ್ ಪಟೇಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
*ವಿದರ್ಭ ಸೆಮಿ ಫೈನಲ್ಗೆ, ಕರುಣ್ ನಾಯರ್ ‘ಪಂದ್ಯಶ್ರೇಷ್ಠ’
ನಾಗ್ಪುರದಲ್ಲಿ ರಣಜಿ ಟೂರ್ನಿಯ 2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡದ ವಿರುದ್ಧ ಗೆಲ್ಲಲು 401 ರನ್ ಗುರಿ ಪಡೆದಿದ್ದ ತಮಿಳುನಾಡು ತಂಡವು ಸೋನು ಯಾದವ್(57ರನ್) ಹಾಗೂ ಪ್ರದೋಶ್ ರಂಜನ್(53 ರನ್)ಅರ್ಧಶತಕದ ಕೊಡುಗೆಯ ಹೊರತಾಗಿಯೂ 202 ರನ್ಗೆ ಆಲೌಟಾಯಿತು. 198 ರನ್ ಅಂತರದಿಂದ ಸೋಲುಂಡಿತು. ನಿರೀಕ್ಷೆಯಂತೆಯೇ ಭರ್ಜರಿ ಜಯ ಗಳಿಸಿದ ವಿದರ್ಭ ತಂಡವು ಸೆಮಿ ಫೈನಲ್ಗೆ ತಲುಪಿತು.
ಬ್ಯಾಟಿಂಗ್ನಲ್ಲಿ ಮಿಂಚಿದ್ದ ಹರ್ಷ ದುಬೆ 40 ರನ್ಗೆ 3 ವಿಕೆಟ್ಗಳನ್ನು ಪಡೆದು ಬೌಲಿಂಗ್ನಲ್ಲೂ ಮಿಂಚಿದರು. ದುಬೆಗೆ ನಚಿಕೇತ್(3-19)ಉತ್ತಮ ಸಾಥ್ ನೀಡಿದರು. ತಮಿಳುನಾಡು ಪರ ಸಾಯಿ ಸುದರ್ಶನ್(2), ವಿಜಯ್ ಶಂಕರ್(5)ಹಾಗೂ ನಾಯಕ ಸಾಯಿ ಕಿಶೋರ್(13)ವಿಫಲರಾದರು.
ಇದಕ್ಕೂ ಮೊದಲು 5 ವಿಕೆಟ್ಗಳ ನಷ್ಟಕ್ಕೆ 169 ರನ್ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ವಿದರ್ಭ ತಂಡವು ಯಶ್ ರಾಥೋಡ್ ಶತಕ(112 ರನ್,213 ಎಸೆತ)ಹಾಗೂ ಹರ್ಷ ದುಬೆ ಅರ್ಧಶತಕದ(64 ರನ್, 104 ಎಸೆತ)ಸಹಾಯದಿಂದ 272 ರನ್ ಗಳಿಸಿತು. ತಮಿಳುನಾಡು ಗೆಲುವಿಗೆ 401 ರನ್ ಗುರಿ ನೀಡಿತು. ವಿದರ್ಭ ತಂಡವು ಮೊದಲ ಇನಿಂಗ್ಸ್ನಲ್ಲಿ ಕರುಣ್ ನಾಯರ್ ಶತಕದ (122 ರನ್)ಸಹಾಯದಿಂದ 353 ರನ್ ಗಳಿಸಿದ ಕಾರಣ 128 ರನ್ ಮುನ್ನಡೆ ಪಡೆದಿತ್ತು.
ಮತ್ತೊಮ್ಮೆ ಬ್ಯಾಟಿಂಗ್ನಲ್ಲಿ ಮಿಂಚಿದ ಕರುಣ್ ನಾಯರ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು.
*ಹರ್ಯಾಣಕ್ಕೆ ಸೋಲುಣಿಸಿದ ಮುಂಬೈ ತಂಡ ಸೆಮಿ ಫೈನಲ್ ಗೆ
ಕೋಲ್ಕತಾದಲ್ಲಿ ನಡೆದ ರಣಜಿ ಟ್ರೋಫಿಯ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವು ಹರ್ಯಾಣ ತಂಡವನ್ನು 152 ರನ್ ಅಂತರದಿಂದ ಮಣಿಸಿದೆ. ಈ ಮೂಲಕ ಅಂತಿಮ-4ರ ಘಟ್ಟಕ್ಕೆ ತಲುಪಿದೆ.
4ನೇ ದಿನವಾದ ಮಂಗಳವಾರ ಗೆಲ್ಲಲು 354 ರನ್ ಗುರಿ ಪಡೆದ ಹರ್ಯಾಣ ತಂಡವು ಎಡಗೈ ವೇಗಿ ರಾಯ್ಸ್ಟನ್ ಡಯಾಸ್(5-39), ಶಾರ್ದೂಲ್ ಠಾಕೂರ್(3-26) ಹಾಗೂ ತನುಷ್ ಕೋಟ್ಯಾನ್(2-15)ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 201 ರನ್ಗೆ ಆಲೌಟಾಯಿತು. ಹರ್ಯಾಣದ ಪರ ಲಕ್ಷ್ಯ ದಲಾಲ್(64 ರನ್)ಹಾಗೂ ಸುಮಿತ್ಕುಮಾರ್(62 ರನ್)ಒಂದಷ್ಟು ಪ್ರತಿರೋಧ ಒಡ್ಡಿದರು.
ಇದಕ್ಕೂ ಮೊದಲು 4 ವಿಕೆಟ್ಗಳ ನಷ್ಟಕ್ಕೆ 278 ರನ್ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ಮುಂಬೈ ತಂಡವು ನಾಯಕ ಅಜಿಂಕ್ಯ ರಹಾನೆ ಶತಕದ(108 ರನ್, 180 ಎಸೆತ)ಸಹಾಯದಿಂದ 339 ರನ್ ಗಳಿಸಿ ಹರ್ಯಾಣ ತಂಡಕ್ಕೆ ಕಠಿಣ ಗುರಿ ನಿಗದಿಪಡಿಸಿತು.
30 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಶಿವಂ ದುಬೆ 48 ರನ್ ಗಳಿಸಿ ಔಟಾದರು. ರಹಾನೆ ಜೊತೆಗೆ 5ನೇ ವಿಕೆಟ್ಗೆ 85 ರನ್ ಜೊತೆಯಾಟ ನಡೆಸಿದರು. ಹರ್ಯಾಣದ ಪರ ಅನುಜ್ ಥಕ್ರಾಲ್(4-70)ಯಶಸ್ವಿ ಪ್ರದರ್ಶನ ನೀಡಿದರು.
*ಕೇರಳ ತಂಡದ ಗೆಲುವಿಗೆ 399 ರನ್ ಗುರಿ ನೀಡಿದ ಜಮ್ಮು-ಕಾಶ್ಮೀರ
ಪುಣೆಯಲ್ಲಿ ನಡೆಯುತ್ತಿರುವ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡವು ಕೇರಳ ತಂಡದ ಗೆಲುವಿಗೆ 399 ರನ್ ಗುರಿ ನೀಡಿತು. 4ನೇ ದಿನದಾಟದಂತ್ಯಕ್ಕೆ 2 ವಿಕೆಟ್ಗಳ ನಷ್ಟಕ್ಕೆ 100 ರನ್ ಗಳಿಸಿರುವ ಕೇರಳ ತಂಡ ಕೊನೆಯ ದಿನವಾದ ಬುಧವಾರ ಗೆಲುವಿಗೆ ಇನ್ನೂ 299 ರನ್ ಗಳಿಸಬೇಕಾಗಿದೆ.
ಅಕ್ಷಯ್ ಚಂದ್ರನ್(32 ರನ್)ಹಾಗೂ ಸಚಿನ್ ಬೇಬಿ(19)ಕ್ರೀಸ್ ಕಾಯ್ದುಕೊಂಡಿದ್ದಾರೆ. ಕಾಶ್ಮೀರದ ಪರ ಯುದ್ಧವೀರ್ ಸಿಂಗ್(2-31)ಎರಡು ವಿಕೆಟ್ಗಳನ್ನು ಪಡೆದಿದ್ದಾರೆ.
ಇದಕ್ಕೂ ಮೊದಲು 3 ವಿಕೆಟ್ಗಳ ನಷ್ಟಕ್ಕೆ 180 ರನ್ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ಜಮ್ಮು-ಕಾಶ್ಮೀರ ತಂಡವು ನಾಯಕ ಪರಾಸ್ ಡೋಗ್ರಾ(132 ರನ್, 232 ಎಸೆತ)ಶತಕ, ಕನ್ಹಯಾ ವಧ್ವಾನ್(64 ರನ್)ಹಾಗೂ ಸಾಹಿಲ್ ಲೊಟ್ರಾ(59 ರನ್)ಅರ್ಧಶತಕದ ಬಲದಿಂದ 9 ವಿಕೆಟ್ಗಳ ನಷ್ಟಕ್ಕೆ 399 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು. ಕೇರಳ ತಂಡದ ಗೆಲುವಿಗೆ 399 ರನ್ ಗುರಿ ನೀಡಿದೆ.