ರಣಜಿ ಟ್ರೋಫಿ; ಇದೇ ಮೊದಲ ಬಾರಿ ಫೈನಲ್ ಗೆ ತಲುಪಿದ ಕೇರಳ, ವಿದರ್ಭ ಎದುರಾಳಿ

PC : thehindu.com
ಅಹ್ಮದಾಬಾದ್: ಕುತೂಹಲಭರಿತ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಮೊದಲ ಇನಿಂಗ್ಸ್ನಲ್ಲಿ ಪಡೆದ ಕೇವಲ 2 ರನ್ ಮುನ್ನಡೆಯ ಆಧಾರದಲ್ಲಿ ಗುಜರಾತ್ ತಂಡವನ್ನು ಹಿಮ್ಮೆಟ್ಟಿಸಿದ ಕೇರಳ ಕ್ರಿಕೆಟ್ ತಂಡ ಇದೇ ಮೊದಲ ಬಾರಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಫೈನಲ್ ಗೆ ಅರ್ಹತೆ ಪಡೆದು ಇತಿಹಾಸ ನಿರ್ಮಿಸಿದೆ.
ಇದೇ ವೇಳೆ ಮತ್ತೊಂದು ಸೆಮಿ ಫೈನಲ್ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ವಿದರ್ಭ ತಂಡವು ಹಾಲಿ ಚಾಂಪಿಯನ್ ಮುಂಬೈ ತಂಡವನ್ನು 80 ರನ್ ಅಂತರದಿಂದ ಮಣಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. ಫೆಬ್ರವರಿ 26ರಿಂದ ನಾಗ್ಪುರದಲ್ಲಿ ಆರಂಭವಾಗಲಿರುವ ಫೈನಲ್ ಪಂದ್ಯದಲ್ಲಿ ಆತಿಥೇಯ ವಿದರ್ಭ ಹಾಗೂ ಕೇರಳ ತಂಡ ಸೆಣಸಾಡಲಿವೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಕೇರಳ ತಂಡವು ಮುಹಮ್ಮದ್ ಅಝರುದ್ದೀನ್ ಅವರ ಔಟಾಗದೆ 177 ರನ್ ಸಹಾಯದಿಂದ 457 ರನ್ ಗಳಿಸಿತು. ಪ್ರಿಯಾಂಕ್ ಪಾಂಚಾಲ್ ಗಳಿಸಿದ 148 ರನ್, ಆರ್ಯ ದೇಸಾಯಿ(73 ರನ್) ಹಾಗೂ ಜೈಮೀತ್ ಪಟೇಲ್(79 ರನ್) ಅವರ ಅರ್ಧಶತಕದ ಕೊಡುಗೆಯ ನೆರವಿನಿಂದ ಗುಜರಾತ್ ತೀವ್ರ ಪೈಪೋಟಿ ನೀಡಿತು. ಆದರೆ ಕೇರಳದ ಅವಳಿ ಸ್ಪಿನ್ನರ್ಗಳಾದ ಆದಿತ್ಯ ಸರ್ವಾಟೆ(4-111)ಹಾಗೂ ಜಲಜ್ ಸಕ್ಸೇನ (4-149)ತಲಾ 4 ವಿಕೆಟ್ಗಳನ್ನು ಉರುಳಿಸಿ ಗುಜರಾತ್ ತಂಡವನ್ನು ಮೊದಲ ಇನಿಂಗ್ಸ್ನಲ್ಲಿ 455 ರನ್ಗೆ ನಿಯಂತ್ರಿಸಿದರು. ಕೇರಳ ತಂಡಕ್ಕೆ ಕೇವಲ 2 ರನ್ ಮುನ್ನಡೆ ಒದಗಿಸಿಕೊಟ್ಟರು.
ಕೇರಳದ ಸ್ಕೋರನ್ನು ಸರಿಗಟ್ಟಲು ಗುಜರಾತ್ಗೆ 2 ರನ್ ಅಗತ್ಯವಿದ್ದಾಗ ಅರ್ಝಾನ್(10 ರನ್) ಅವರು ಸರ್ವಾಟೆ ಎಸೆತವನ್ನು ಕೆಣಕಲು ಹೋದಾಗ ಚೆಂಡು ಶಾರ್ಟ್-ಲೆಗ್ ಫೀಲ್ಡರ್ ಸಲ್ಮಾನ್ ನಿಝಾರ್ ಅವರ ಹೆಲ್ಮೆಟ್ಗೆ ಅಪ್ಪಳಿಸಿ ಸ್ಲಿಪ್ನಲ್ಲಿ ಫೀಲ್ಡಿಂಗ್ ನಿರತ ನಾಯಕ ಸಚಿನ್ ಬೇಬಿ ಅವರ ಕೈ ಸೇರಿತು. ಆಗ ಗುಜರಾತ್ ಇನಿಂಗ್ಸ್ ಮುನ್ನಡೆಯ ಕನಸು ಭಗ್ನವಾಯಿತು.
ಕೇರಳ ತಂಡವು ತನ್ನ 2ನೇ ಇನಿಂಗ್ಸ್ನಲ್ಲಿ 4 ವಿಕೆಟ್ ಗಳ ನಷ್ಟಕ್ಕೆ 114 ರನ್ ಗಳಿಸಿದ್ದಾಗ ಉಭಯ ತಂಡಗಳು ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದವು.ಆಗ ಕೇರಳ ಫೈನಲ್ ಗೆ ತಲುಪಿ ಇತಿಹಾಸ ರಚಿಸುವುದು ದೃಢಪಟ್ಟಿತು.
ಕೇವಲ ಎರಡನೇ ಬಾರಿ ರಣಜಿ ಟ್ರೋಫಿಯಲ್ಲಿ ಸೆಮಿ ಫೈನಲ್ ಗೆ ತಲುಪಿದ್ದ ಕೇರಳದ ಪಾಲಿಗೆ ಇದು ಮಹತ್ವದ ಸಾಧನೆಯಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೂಡ ಕೇವಲ 1 ರನ್ ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಜಮ್ಮು-ಕಾಶ್ಮೀರ ತಂಡವನ್ನು ಹಿಂದಿಕ್ಕಿದ್ದ ಕೇರಳ ತಂಡವು ಸೆಮಿ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡಿತ್ತು . ಇದೀಗ ಇಡೀ ರಾಜ್ಯದ ಕನಸಿನ ಮೂಟೆ ಹೊತ್ತು ದೇಶೀಯ ಕ್ರಿಕೆಟ್ ಚರಿತ್ರೆಯ ಪ್ರಮುಖ ಪಂದ್ಯವನ್ನಾಡಲು ತಯಾರಿ ನಡೆಸಲಿದೆ.
ಔಟಾಗದೆ 177 ರನ್ ಗಳಿಸಿ ಕೇರಳ ತಂಡ ಬೃಹತ್ ಮೊತ್ತ ಗಳಿಸಲು ಕಾರಣವಾಗಿದ್ದ ಮುಹಮ್ಮದ್ ಅಝರುದ್ದೀನ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿ ಪಡೆದರು.
►ಸತತ ಎರಡನೇ ಬಾರಿ ಫೈನಲ್ ಗೆ ತಲುಪಿದ ವಿದರ್ಭ ತಂಡ
ದೇಶೀಯ ಕ್ರಿಕೆಟ್ನ ಅತ್ಯಂತ ಯಶಸ್ವಿ ತಂಡ ಮುಂಬೈಯನ್ನು 2ನೇ ಸೆಮಿ ಫೈನಲ್ನಲ್ಲಿ 80 ರನ್ ಅಂತರದಿಂದ ಮಣಿಸಿದ ವಿದರ್ಭ ತಂಡವು 2024-25ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ.
ವಿದರ್ಭ ತಂಡವು ರಣಜಿ ಟೂರ್ನಿಯಲ್ಲಿ 4ನೇ ಬಾರಿ ಹಾಗೂ ಸತತ ಎರಡನೇ ಬಾರಿ ಫೈನಲ್ ಗೆ ಪ್ರವೇಶಿಸಿದೆ. ಕಳೆದ ವರ್ಷ ಫೈನಲ್ ಗೆ ತಲುಪಿದ್ದ ವಿದರ್ಭ ತಂಡವು ಮುಂಬೈ ತಂಡಕ್ಕೆ ಸೋತಿತ್ತು. ಇದೀಗ ಮುಂಬೈ ತಂಡವನ್ನು ಮಣಿಸಿ ಆ ಸೋಲಿಗೆ ಸೇಡು ತೀರಿಸಿಕೊಂಡಿದೆ.
ಗ್ರೂಪ್ ಹಂತದಲ್ಲಿ ಹಿಮಾಚಲ ಪ್ರದೇಶ, ರಾಜಸ್ಥಾನ, ಉತ್ತರಾಖಂಡ, ಪುದುಚೇರಿ ಹಾಗೂ ಆಂಧ್ರ ತಂಡಗಳನ್ನು ಮಣಿಸಿದ್ದ ವಿದರ್ಭ ತಂಡವು ಗುಜರಾತ್ ಹಾಗೂ ಹೈದರಾಬಾದ್ ವಿರುದ್ಧ ಡ್ರಾ ಸಾಧಿಸಿತ್ತು.
ಅಜೇಯ ಗೆಲುವಿನ ದಾಖಲೆಯೊಂದಿಗೆ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ವಿದರ್ಭ ತಂಡವು ತಮಿಳುನಾಡು ತಂಡವನ್ನು ಇನಿಂಗ್ಸ್ ಹಾಗೂ 88 ರನ್ಗಳಿಂದ ಸೋಲಿಸಿತ್ತು. ಇದೀಗ ಸೆಮಿ ಫೈನಲ್ನಲ್ಲೂ ಜಯಭೇರಿ ಬಾರಿಸಿ ಅಜೇಯ ದಾಖಲೆಯೊಂದಿಗೆ ಫೈನಲ್ ಗೆ ಪ್ರವೇಶಿಸಿದೆ.
ಗೆಲ್ಲಲು 406 ರನ್ ಗುರಿ ಪಡೆದಿದ್ದ ಮುಂಬೈ ತಂಡವು 5ನೇ ದಿನದಾಟವಾದ ಶುಕ್ರವಾರ 3 ವಿಕೆಟ್ಗಳ ನಷ್ಟಕ್ಕೆ 83 ರನ್ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿತು. 97.5 ಓವರ್ಗಳಲ್ಲಿ 325 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಎಡಗೈ ಸ್ಪಿನ್ನರ್ ಹರ್ಷ ದುಬೆ(5-127)ಈ ಋತುವಿನಲ್ಲಿ ಗಳಿಸಿದ ತನ್ನ 7ನೇ ಐದು ವಿಕೆಟ್ ಗೊಂಚಲು ಮೂಲಕ ಮುಂಬೈಗೆ ದುಸ್ವಪ್ನರಾದರು. ದುಬೆ ಪ್ರಸಕ್ತ ಋತುವಿನಲ್ಲಿ ಒಟ್ಟು 66 ವಿಕೆಟ್ಗಳನ್ನು ಪಡೆದರು. ಸದ್ಯ ರಣಜಿಯಲ್ಲಿ ಗರಿಷ್ಠ ವಿಕೆಟ್ ಪಡೆದಿರುವ ಬಿಹಾರದ ಸ್ಪಿನ್ನರ್ ಅಶುತೋಶ್ ಅಮನ್ರ ದಾಖಲೆ ಮುರಿಯಲು ಕೇವಲ 2 ವಿಕೆಟ್ ಅಗತ್ಯವಿದೆ. ಯಶ್ ಠಾಕೂರ್(2-43) ಹಾಗೂ ಪಾರ್ಥ ರೆಖಾಡೆ(2-70) ತಲಾ ಎರಡು ವಿಕೆಟ್ಗಳನ್ನು ಪಡೆದು ದುಬೆಗೆ ಸಾಥ್ ನೀಡಿದರು.
ಮುಂಬೈ ಬ್ಯಾಟಿಂಗ್ನಲ್ಲಿ ಆಲ್ರೌಂಡರ್ ಶಾರ್ದೂಲ್ ಠಾಕೂರ್(66 ರನ್, 124 ಎಸೆತ)ಸರ್ವಾಧಿಕ ಸ್ಕೋರ್ ಗಳಿಸಿದರು. ಶಮ್ಸ್ ಮುಲಾನಿ(46 ರನ್, 94 ಎಸೆತ), ಆಕಾಶ್ ಆನಂದ್(39 ರನ್,143 ಎಸೆತ),ಮೋಹಿತ್ ಅವಸ್ಥಿ(34 ರನ್, 43 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು. ಕೊನೆಯ ವಿಕೆಟ್ನಲ್ಲಿ 52 ರನ್ ಜೊತೆಯಾಟ ನಡೆಸಿದ ಮೋಹಿತ್ ಅವಸ್ಥಿ ಹಾಗೂ ರಾಯ್ಸ್ಟನ್ ಡಯಾಸ್ ಮುಂಬೈ ತಂಡದ ಸೋಲಿನ ಅಂತರ ಕುಗ್ಗಿಸಿದರು.
54 ಹಾಗೂ 151 ರನ್ ಗಳಿಸಿದ ವಿದರ್ಭದ ಮಧ್ಯಮ ಕ್ರಮಾಂಕದ ಬ್ಯಾಟರ್ ಯಶ್ ರಾಥೋಡ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.
►ಸಂಕ್ಷಿಪ್ತ ಸ್ಕೋರ್
ವಿದರ್ಭ ಮೊದಲ ಇನಿಂಗ್ಸ್: 383 ರನ್
ಮುಂಬೈ ಮೊದಲ ಇನಿಂಗ್ಸ್: 270 ರನ್
ವಿದರ್ಭ ಎರಡನೇ ಇನಿಂಗ್ಸ್: 292 ರನ್
ಮುಂಬೈ 2ನೇ ಇನಿಂಗ್ಸ್: 325 ರನ್
*ಪಂದ್ಯಶ್ರೇಷ್ಠ: ಯಶ್ ರಾಥೋಡ್.