ಮೂರನೇ ಬಾರಿ ರಣಜಿ ಟ್ರೋಫಿ ಗೆಲ್ಲುವತ್ತ ವಿದರ್ಭ ದಿಟ್ಟ ಹೆಜ್ಜೆ

PC : PTI
ನಾಗ್ಪುರ: ಭರ್ಜರಿ ಫಾರ್ಮ್ನಲ್ಲಿರುವ ಕರುಣ್ ನಾಯರ್ ಶತಕದ ಬಲದಿಂದ ಆತಿಥೇಯ ವಿದರ್ಭ ಕ್ರಿಕೆಟ್ ತಂಡ ಕೇರಳ ವಿರುದ್ಧದ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದ್ದು, ಮೂರನೇ ಪ್ರಶಸ್ತಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.
2014-15ರ ರಣಜಿ ಫೈನಲ್ನಲ್ಲಿ ತಮಿಳುನಾಡು ವಿರುದ್ಧ 328 ರನ್ ಗಳಿಸಿ ಕರ್ನಾಟಕ ತಂಡ ರಣಜಿ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದ ಕರುಣ್ ನಾಯರ್ ಇದೀಗ 10 ವರ್ಷಗಳ ನಂತರ ಮತ್ತೊಂದು ರಣಜಿ ಫೈನಲ್ನಲ್ಲಿ ತನ್ನ ಶಕ್ತಿ ಅನಾವರಣಗೊಳಿಸಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 23ನೇ ಹಾಗೂ ಈ ವರ್ಷ 4ನೇ ಶತಕ(ಔಟಾಗದೆ 132 ರನ್,280 ಎಸೆತ,10 ಬೌಂಡರಿ, 2 ಸಿಕ್ಸರ್)ಗಳಿಸಿರುವ ಕರುಣ್ ಅವರು ಭಾರತದ ಅತ್ಯಂತ ಪ್ರತಿಷ್ಠಿತ ದೇಶಿ ಪಂದ್ಯಾವಳಿಯಲ್ಲಿ ವಿದರ್ಭ ತಂಡ 3ನೇ ಬಾರಿ ಪ್ರಶಸ್ತಿ ಗೆಲ್ಲುವುದನ್ನು ತಾತ್ವಿಕವಾಗಿ ಖಚಿತಪಡಿಸಿದ್ದಾರೆ.
2013-14 ಹಾಗೂ 2014-15ರಲ್ಲಿ ಕರ್ನಾಟಕದ ಪರ ಎರಡು ಬಾರಿ ರಣಜಿ ಟ್ರೋಫಿ ಜಯಿಸಿದ್ದ ಕರುಣ್ ಇದೀಗ 3ನೇ ಪ್ರಶಸ್ತಿಯ ಕನಸು ಕಾಣುತ್ತಿದ್ದಾರೆ.
ಕರುಣ್ ನಾಯರ್ ಶತಕದ ಬಲದಿಂದ ವಿದರ್ಭ ತಂಡ ಶನಿವಾರ 4ನೇ ದಿನದಾಟದಂತ್ಯಕ್ಕೆ 4 ವಿಕೆಟ್ಗಳ ನಷ್ಟಕ್ಕೆ 249 ರನ್ ಗಳಿಸಿದ್ದು, ರವಿವಾರ ಕೊನೆಯ ದಿನದಾಟಕ್ಕಿಂತ ಮೊದಲು 286 ರನ್ ಮುನ್ನಡೆಯಲ್ಲಿದೆ.
ಕರುಣ್ ಈ ಋತುವಿನಲ್ಲಿ ಎಲ್ಲ ಮಾದರಿ ಕ್ರಿಕೆಟ್ನಲ್ಲಿ ಸಿಡಿಸಿರುವ 9ನೇ ಶತಕ ಇದಾಗಿದೆ. ಮೊದಲ ಇನಿಂಗ್ಸ್ನಲ್ಲಿ 86 ರನ್ಗೆ ರನೌಟಾಗದೇ ಇರುತ್ತಿದ್ದರೆ 10ನೇ ಶತಕ ದಾಖಲಿಸಬಹುದಿತ್ತು.
ಕರುಣ್ ಮೊದಲ ಇನಿಂಗ್ಸ್ನಲ್ಲಿ ದಾನಿಶ್ ಮಾಲೆವಾರ್ ಅವರೊಂದಿಗೆ 4ನೇ ವಿಕೆಟ್ಗೆ 215 ರನ್ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾಗಿದ್ದರು. ಈ ಜೋಡಿಯು ಶನಿವಾರ ಕೂಡ ಕೇರಳ ತಂಡವನ್ನು ಕಾಡಿದ್ದು, 3ನೇ ವಿಕೆಟ್ಗೆ 182 ರನ್ ಸೇರಿಸಿತು.
ವಿದರ್ಭ ತಂಡವು ಇಬ್ಬರೂ ಆರಂಭಿಕರನ್ನು 3ನೇ ಓವರ್ನೊಳಗೆ ಕಳೆದುಕೊಂಡಿತು. ಪಾರ್ಥ ರೆಖಾಡೆ (1)ಹಾಗೂ ಧ್ರುವ್ ಶೋರೆ (5 ರನ್) ವಿಕೆಟ್ ಪತನಗೊಂಡಾಗ ವಿದರ್ಭ 7 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮೊದಲ ಇನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ 21ರ ಹರೆಯದ ದಾನಿಶ್ 2ನೆ ಇನಿಂಗ್ಸ್ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬೀಳುವುದರಿಂದ ಬಚಾವಾದರು. ದಾನಿಶ್(73 ರನ್, 162 ಎಸೆತ, 5 ಬೌಂಡರಿ)ಕೊನೆಗೂ ಔಟಾಗಿದ್ದು, ಕರುಣ್ ತಂಡಕ್ಕೆ ಆಸರೆಯಾಗಿದ್ದಾರೆ. 31 ರನ್ ಗಳಿಸಿದ್ದಾಗ ಜೀವದಾನ ಪಡೆದಿರುವ ಕರುಣ್ ಅವರು ಕೇರಳ ತಂಡಕ್ಕೆ ಸಿಂಹಸ್ವಪ್ನರಾಗಿದ್ದಾರೆ.
ಸಂಕ್ಷಿಪ್ತ ಸ್ಕೋರ್
ವಿದರ್ಭ ಮೊದಲ ಇನಿಂಗ್ಸ್: 379 ರನ್
ಕೇರಳ ಮೊದಲ ಇನಿಂಗ್ಸ್: 342 ರನ್
ವಿದರ್ಭ 2ನೇ ಇನಿಂಗ್ಸ್: 249/4
(ಕರುಣ್ ನಾಯರ್ ಔಟಾಗದೆ 132, ದಾನಿಶ್ ಮಾಲೆವಾರ್ 73, ಅಕ್ಷಯ್ 1-29)