ರಣಜಿ ಟ್ರೋಫಿ ಫೈನಲ್: ವಿದರ್ಭ ಗೆಲುವಿಗೆ 538 ರನ್ ಗುರಿ ನೀಡಿದ ಮುಂಬೈ
ಮುಶೀರ್ ಖಾನ್ ಶತಕ, ಶ್ರೇಯಸ್ ಅಯ್ಯರ್, ರಹಾನೆ, ಮುಲಾನಿ ಅರ್ಧಶತಕ
Photo: PTI
ಮುಂಬೈ: ಅಗ್ರ ಕ್ರಮಾಂಕದ ಬ್ಯಾಟರ್ ಗಳಾದ ಮುಶೀರ್ ಖಾನ್(136 ರನ್, 326 ಎಸೆತ) ತಾಳ್ಮೆಯ ಶತಕ, ಶ್ರೇಯಸ್ ಅಯ್ಯರ್(95 ರನ್, 111 ಎಸೆತ), ಅಜಿಂಕ್ಯ ರಹಾನೆ(73 ರನ್, 143 ಎಸೆತ) ಹಾಗೂ ಶಮ್ಸ್ ಮುಲಾನಿ(ಔಟಾಗದೆ 50 ರನ್, 85 ಎಸೆತ) ಅರ್ಧಶತಕಗಳ ಕೊಡುಗೆಯ ನೆರವಿನಂದ ಮುಂಬೈ ಕ್ರಿಕೆಟ್ ತಂಡ ವಿದರ್ಭ ತಂಡಕ್ಕೆ ರಣಜಿ ಟ್ರೋಫಿ ಫೈನಲ್ ಪಂದ್ಯದ ಗೆಲುವಿಗೆ 538 ರನ್ ಗುರಿ ನೀಡಿದೆ.
ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಈ ಹಿಂದೆ 536 ರನ್ ಅನ್ನು ಯಶಸ್ವಿಯಾಗಿ ಚೇಸ್ ಮಾಡಲಾಗಿದೆ.
ಗೆಲ್ಲಲು ಕಠಿಣ ಗುರಿ ಪಡೆದಿರುವ ವಿದರ್ಭ ತಂಡ ಮಂಗಳವಾರ ಮೂರನೇ ದಿನದಾಟದಂತ್ಯಕ್ಕೆ 2 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ. ಧ್ರುವ್ ಶೋರೆ(7 ರನ್) ಹಾಗೂ ಅಥರ್ವ ಟೈಡ್(ಔಟಾಗದೆ 3 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮೊದಲು 2 ವಿಕೆಟ್ ನಷ್ಟಕ್ಕೆ 141 ರನ್ ನಿಂದ ತನ್ನ ಎರಡನೇ ಇನಿಂಗ್ಸ್ ಮುಂದುವರಿಸಿದ ಮುಂಬೈ ತಂಡ ಮೂರನೇ ದಿನದಾಟದುದ್ದಕ್ಕೂ ಬ್ಯಾಟಿಂಗ್ ನಲ್ಲಿ ವಿಜೃಂಭಿಸಿ ರನ್ ರಾಶಿ ಹಾಕಿತು.
ರಹಾನೆ ವೇಗಿ ಉಮೇಶ್ ಯಾದವ್ ಎಸೆದ ಮೊದಲ ಓವರ್ ನಲ್ಲಿ ಬೌಂಡರಿ ಗಳಿಸಿದರು. ಆದರೆ ನಿನ್ನೆಯ ಮೊತ್ತಕ್ಕೆ 15 ರನ್ ಗಳಿಸಿ 58 ರನ್ ಗೆ ಎಡಗೈ ಸ್ಪಿನ್ನರ್ ಹರ್ಷ್ ದುಬೆಗೆ ವಿಕೆಟ್ ಒಪ್ಪಿಸಿದರು.
ಅಯ್ಯರ್ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ಆದಿತ್ಯ ಬೌಲಿಂಗ್ ನಲ್ಲಿ ಸಿಕ್ಸರ್ ಸಿಡಿಸಿದರು. ಯಶ್ ಠಾಕೂರ್ ಹಾಗೂ ಯಾದವ್ ಶಾರ್ಟ್ ಬಾಲ್ ನಿಂದ ಅಯ್ಯರ್ ರನ್ನು ಪರೀಕ್ಷಿಸಿದರು. ಅಯ್ಯರ್ ಈ ಇಬ್ಬರನ್ನು ಸಮರ್ಥವಾಗಿ ಎದುರಿಸಿದರು. 95 ರನ್ ಗಳಿಸಿದ್ದ ಅಯ್ಯರ್ ಸಿಕ್ಸರ್ ಸಿಡಿಸಿ ಮೂರಂಕೆ ದಾಟಲು ಮುಂದಾದರು. ಆದರೆ ಆದಿತ್ಯ ಠಾಕ್ರೆಗೆ ವಿಕೆಟ್ ಒಪ್ಪಿಸಿದರು. ಅಯ್ಯರ್ ಔಟಾದಾಗ ಮುಂಬೈನ ಮುನ್ನಡೆ 450ರ ಗಡಿ ದಾಟಿತ್ತು.
ಅಯ್ಯರ್ ವಿಕೆಟ್ ಬಿದ್ದ ನಂತರ ಮುಂಬೈ ತಂಡ ಹಾರ್ದಿಕ್(5), ಮುಶೀರ್ ಹಾಗೂ ಶಾರ್ದೂಲ್ ಠಾಕೂರ್(0) ವಿಕೆಟ್ ಗಳನ್ನು ಬೆನ್ನುಬೆನ್ನಿಗೆ ಕಳೆದುಕೊಂಡಿತು. ತನುಷ್ ಕೋಟ್ಯಾನ್(13) ವಿಕೆಟನ್ನು ಪಡೆದ ದುಬೆ ಐದು ವಿಕೆಟ್ ಗೊಂಚಲು ಪೂರೈಸಿದರು. ಶಮ್ಸ್ ಮುಲಾನಿ ಕೆಳ ಕ್ರಮಾಂಕದ ಬ್ಯಾಟರ್ಗಳ ಸಹಾಯದಿಂದ ಔಟಾಗದೆ 50 ರನ್ ಗಳಿಸಿದರು.
19ರ ಹರೆಯದ ಮುಶೀರ್ ಖಾನ್ ಆಕರ್ಷಕ ಶತಕ ಗಳಿಸಿದರೆ, ನಾಯಕ ರಹಾನೆ(73 ರನ್, 143 ಎಸೆತ, 5 ಬೌಂಡರಿ, 1 ಸಿಕ್ಸರ್), ಟೀಮ್ ಇಂಡಿಯಾಕ್ಕೆ ವಾಪಸಾಗಲು ಬಯಸಿರುವ ಶ್ರೇಯಸ್ ಅಯ್ಯರ್(95 ರನ್, 111 ಎಸೆತ, 10 ಬೌಂಡರಿ, 3 ಸಿಕ್ಸರ್), ಆಲ್ರೌಂಡರ್ ಮುಲಾನಿ(ಔಟಾಗದೆ 50, 85 ಎಸೆತ, 6 ಬೌಂಡರಿ) ಅರ್ಧಶತಕದ ಕೊಡುಗೆ ನೀಡಿದರು. ಇವರೆಲ್ಲರ ಸಂಘಟಿತ ಪ್ರಯತ್ನದಿಂದ ಮುಂಬೈ ತನ್ನ ಎರಡನೇ ಇನಿಂಗ್ಸ್ ನಲ್ಲಿ 130.2 ಓವರ್ ಗಳಲ್ಲಿ 418 ರನ್ ಗಳಿಸಿ ಆಲೌಟಾಯಿತು.
ದಾಖಲೆಯ 42ನೇ ರಣಜಿ ಟ್ರೋಫಿ ಗೆಲ್ಲುವ ಗುರಿ ಇಟ್ಟುಕೊಂಡಿರುವ ಮುಂಬೈ ಬ್ಯಾಟಿಂಗ್ ಸ್ನೇಹಿ ವಾಂಖೆಡೆ ಸ್ಟೇಡಿಯಮ್ ನಲ್ಲಿ ರನ್ ಹೊಳೆಯನ್ನೇ ಹರಿಸಿತು.
ಮುಶೀರ್ ಖಾನ್ ಎರಡು ಶತಕದ ಜೊತೆಯಾಟ ನಡೆಸಿ ಮುಂಬೈ ಪ್ರಾಬಲ್ಯಕ್ಕೆ ಕಾರಣರಾದರು. ರಹಾನೆ ಜೊತೆಗೆ 3ನೇ ವಿಕೆಟ್ ಗೆ 130 ರನ್ ಜೊತೆಯಾಟದಲ್ಲಿ ಭಾಗಿಯಾದ ಮುಶೀರ್ ಆ ನಂತರ ಶ್ರೇಯಸ್ ಅಯ್ಯರ್ ಜೊತೆಗೆ 4ನೇ ವಿಕೆಟ್ಗೆ 168 ರನ್ ಸೇರಿಸಿ ಮುಂಬೈ ರನ್ ಹೆಚ್ಚಿಸಿದರು.
ವಿದರ್ಭ ಪರ ಎಡಗೈ ಸ್ಪಿನ್ನರ್ ಹರ್ಷ್ ದುಬೆ(5-144) ಐದು ವಿಕೆಟ್ ಗೊಂಚಲು ಪಡೆದರು. ಯಶ್ ಠಾಕೂರ್(3-79) ಮೂರು ವಿಕೆಟ್ ಗಳನ್ನು ಉರುಳಿಸಿದರು.
ಸಚಿನ್ ತೆಂಡುಲ್ಕರ್ ಹಾಗೂ ರೋಹಿತ್ ಶರ್ಮಾ ವಾಂಖೆಡೆ ಸ್ಟೇಡಿಯಮ್ ನಲ್ಲಿ ಹಾಜರಾಗಿ ಮುಂಬೈ ಬ್ಯಾಟರ್ ಗಳ ಪ್ರದರ್ಶನವನ್ನು ಕಣ್ತುಂಬಿಕೊಂಡರು.