ರಣಜಿ ಟ್ರೋಫಿ: ತಮಿಳುನಾಡು ಗೆಲುವಿಗೆ 355 ರನ್ ಗಳ ಬೃಹತ್ ಗುರಿ ನೀಡಿದ ಕರ್ನಾಟಕ
Photo; The hindu
ಚೆನ್ನೈ: ರಣಜಿ ಟ್ರೋಫಿ ಎಲಿಟ್ ಗ್ರೂಪ್ ಸಿ ಪಂದ್ಯದಲ್ಲಿ, ರವಿವಾರ ಕರ್ನಾಟಕವು ತಮಿಳುನಾಡಿನ ಗೆಲುವಿಗೆ 355 ರನ್ ಗಳ ಬೃಹತ್ ಗುರಿಯನ್ನು ನೀಡಿದೆ. ಪಂದ್ಯದ ಮೂರನೇ ದಿನದಾಟದ ಕೊನೆಗೆ ತಮಿಳುನಾಡು ತನ್ನ ದ್ವಿತೀಯ ಇನಿಂಗ್ಸ್ ನಲ್ಲಿ ಒಂದು ವಿಕೆಟ್ ಕಳೆದುಕೊಂಡು 36 ರನ್ ಗಳಿಸಿದೆ. ಇದರೊಂದಿಗೆ ಪ್ರವಾಸಿ ಕರ್ನಾಟಕವು ಬೃಹತ್ ವಿಜಯವೊಂದರತ್ತ ದಾಪುಗಾಲಿಡುತ್ತಿದೆ.
ರವಿವಾರ ಬೆಳಗ್ಗೆ ತಮಿಳುನಾಡು ತನ್ನ ಮೊದಲ ಇನಿಂಗ್ಸ್ ನ್ನು 7 ವಿಕೆಟ್ ಗಳ ನಷ್ಟಕ್ಕೆ 129 ಇದ್ದಲ್ಲಿಂದ ಮುಂದುವರಿಸಿತು. 151 ರನ್ ಗಳನ್ನು ಗಳಿಸುವಷ್ಟರಲ್ಲಿ ಅದು ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು. ಈ ಮೊತ್ತವನ್ನು ಕರ್ನಾಟಕದ ಮೊದಲ ಇನಿಂಗ್ಸ್ ನಲ್ಲಿ ದೇವದತ್ತ ಪಡಿಕ್ಕಲ್ ಒಬ್ಬರೇ ಮಾಡಿದ್ದರು.
ಕರ್ನಾಟಕದ ವಿ. ವೈಶಾಖ್ ತಮಿಳುನಾಡು ಬ್ಯಾಟರ್ಗಳ ಮೇಲೆ ಸವಾರಿ ಮಾಡಿದರು. ಅವರು ಕೇವಲ 26 ರನ್ ಗಳನ್ನು ನೀಡಿ ನಾಲ್ಕು ಪ್ರಮುಖ ವಿಕೆಟ್ ಗಳನ್ನು ಉರುಳಿಸಿದರು. ಇದರೊಂದಿಗೆ ಕರ್ನಾಟಕ 215 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿದೆ.
ಬಳಿಕ ಕರ್ನಾಟಕವು ಫಾಲೋ ಆನ್ ಹೇರದೆ ದ್ವಿತೀಯ ಇನಿಂಗ್ಸ್ ಆರಂಭಿಸಿತು. ಆದರೆ, ದ್ವಿತೀಯ ಇನಿಂಗ್ಸ್ ನಲ್ಲಿ ಅದಕ್ಕೆ ಕೇವಲ 139 ರನ್ ಗಳನ್ನು ಗಳಿಸಲು ಸಾಧ್ಯವಾಯಿತು. ತಮಿಳುನಾಡಿನ ಅಜಿತ್ ರಾಮ್ ಕೇವಲ 61 ರನ್ ಗಳನ್ನು ನೀಡಿ ಐದು ವಿಕೆಟ್ ಗಳನ್ನು ಗಳಿಸಿದರು.
ಅಜಿತ್ ರಾಮ್ ಮೊದಲು ನಾಯಕ ಮಯಾಂಕ್ ಅಗರ್ವಾಲ್ (11)ರ ವಿಕೆಟ್ ಪಡೆದರು. ಬಳಿಕ ವೇಗದ ಎಸೆತವೊಂದರ ಮೂಲಕ ಮನೀಶ್ ಪಾಂಡೆ (14)ಯನ್ನು ಬೌಲ್ಡ್ ಮಾಡಿದರು. ಅವರು ಕಿಶನ್ ಬೆದರೆ (9)ಯನ್ನು ಬೇಗನೇ ವಾಪಸ್ ಕಳುಹಿಸಿದರು.
ಇದು ಅಜಿತ್ ರಾಮ್ ರ ಕ್ರೀಡಾ ಜೀವನದ ಮೂರನೇ ಐದು ವಿಕೆಟ್ ಗೊಂಚಿಲಾಗಿದೆ. ಈ ಪಂದ್ಯದಲ್ಲಿ ಅವರು 136 ರನ್ ಗಳನ್ನು ನೀಡಿ 9 ವಿಕೆಟ್ ಗಳಿಸಿದ್ದಾರೆ.
ಮೊದಲ ಇನಿಂಗ್ಸ್ ನಲ್ಲಿ ಶತಕ ಬಾರಿಸಿದ್ದ ಪಡಿಕ್ಕಲ್ ಎರಡನೇ ಇನಿಂಗ್ಸ್ ನಲ್ಲೂ ದೊಡ್ಡ ಇನ್ನಿಂಗ್ಸೊಂದನ್ನು ನಿರ್ಮಿಸುವ ಸೂಚನೆ ನೀಡಿದರು. ಆದರೆ 36 ರನ್ ಗಳಿಸುವಷ್ಟರಲ್ಲಿ ಎರಡನೇ ಇನಿಂಗ್ಸ್ ನಲ್ಲೂ ಪ್ರದೋಶ್ ರಂಜನ್ ಪೌಲ್ಗೆ ವಿಕೆಟ್ ಒಪ್ಪಿಸಿದರು. ವೈಶಾಖ್ 22 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದರೊಂದಿಗೆ, ಕರ್ನಾಟಕ 354 ರನ್ ಗಳ ಬೃಹತ್ ಮುನ್ನಡೆಯನ್ನು ಗಳಿಸಿದೆ. ದಿನಗಳೆದಂತೆ ಬ್ಯಾಟಿಂಗ್ ಗೆ ಕಠಿಣವಾಗುತ್ತಿರುವ ಮತ್ತು ಸ್ಪಿನ್ನರ್ಗಳಿಗೆ ಹೆಚ್ಚಿನ ನೆರವು ನೀಡುತ್ತಿರುವ ಪಿಚ್ ನಲ್ಲಿ ಜಯ ಗಳಿಸಲು ಈ ಮುನ್ನಡೆ ಧಾರಾಳ ಸಾಕು ಎಂಬುದಾಗಿ ನಿರೀಕ್ಷಿಸಲಾಗಿದೆ.
ದಿನದಾಟ ಮುಗಿದಾಗ ತಮಿಳುನಾಡು ತನ್ನ ಎರಡನೇ ಇನಿಂಗ್ಸ್ ನಲ್ಲಿ ಒಂದು ವಿಕೆಟ್ ಕಳೆದುಕೊಂಡು 36 ರನ್ ಗಳಿಸಿದೆ. ಉತ್ತಮ ಫಾರ್ಮ್ನಲ್ಲಿರುವ ಆರಂಭಿಕ ಎನ್. ಜಗದೀಶನ್ 8 ರನ್ ಗಳಿಸಿ ವೈಶಾಖ್ ಗೆ ವಿಕೆಟ್ ಒಪ್ಪಿಸಿದರು.
ಕೊನೆಯ ದಿನವಾದ ಸೋಮವಾರ, ತಮಿಳುನಾಡಿನ ಗೆಲುವಿಗೆ 319 ರನ್ ಗಳ ಅಗತ್ಯವಿದೆ.