ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್: ಕರ್ನಾಟಕದ ವಿರುದ್ಧ ವಿದರ್ಭಕ್ಕೆ ಭಾರೀ ಮುನ್ನಡೆ
ನಾಗ್ಪುರ: ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದ ಮೂರನೇ ದಿನವಾದ ರವಿವಾರ ವಿದರ್ಭ ಕ್ರಿಕೆಟ್ ತಂಡ ಕರ್ನಾಟಕದ ವಿರುದ್ದ ಒಟ್ಟು 224 ರನ್ ಮುನ್ನಡೆ ಸಾಧಿಸುವ ಮೂಲಕ ಸಂಪೂರ್ಣ ಹಿಡಿತ ಸಾಧಿಸಿದೆ.
ವಿದರ್ಭದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ನಿರುತ್ತರವಾದ ಕರ್ನಾಟಕ ತನ್ನ ಮೊದಲ ಇನಿಂಗ್ಸ್‌ನಲ್ಲಿ 286 ರನ್‌ಗೆ ಆಲೌಟಾಯಿತು. ಹೀಗಾಗಿ ವಿದರ್ಭ 174 ರನ್ ಇನಿಂಗ್ಸ್ ಮುನ್ನಡೆ ಪಡೆಯಿತು. ಈ ಹಿನ್ನೆಲೆಯಲ್ಲಿ ಕರ್ನಾಟಕದ ರಣಜಿ ಟ್ರೋಫಿ ಅಭಿಯಾನ ಬಹುತೇಕ ಮುಕ್ತಾಯಾಗಿದೆ.
ಆತಿಥೇಯ ತಂಡ ವಿದರ್ಭ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿ ಒಟ್ಟು 224 ರನ್ ಮುನ್ನಡೆಯಲ್ಲಿದೆ.
2 ವಿಕೆಟ್ ನಷ್ಟಕ್ಕೆ 98 ರನ್‌ನಿಂದ ಇನಿಂಗ್ಸ್ ಆರಂಭಿಸಿದ ಕರ್ನಾಟಕದ ಬ್ಯಾಟಿಂಗ್ ವಿಭಾಗದಲ್ಲಿ ನಿಕಿನ್ ಜೋಸ್(82 ರನ್, 212 ಎಸೆತ, 11 ಬೌಂಡರಿ)ಒಂದಷ್ಟು ಹೋರಾಟ ನೀಡಿದರು. ಆರಂಭಿಕ ಬ್ಯಾಟರ್ ಆರ್.ಸಮರ್ಥ್(59 ರನ್, 97 ಎಸೆತ, 7 ಬೌಂಡರಿ)ಅರ್ಧಶತಕದ ಕೊಡುಗೆ ನೀಡಿದರು. ಅನುಭವಿ ಆಟಗಾರ ಮನೀಶ್ ಪಾಂಡೆ(15 ರನ್)ವೇಗದ ಬೌಲರ್ ಯಶ್ ಠಾಕೂರ್‌ಗೆ ಸುಲಭ ತುತ್ತಾದರು.
ಕೆವಿ ಅನೀಶ್(34 ರನ್, 48 ಎಸೆತ), ಹಾರ್ದಿಕ್ ರಾಜ್(23 ರನ್), ಶರತ್ ಶ್ರೀನಿವಾಸ್(29 ರನ್) ಹಾಗೂ ವೈಶಾಕ್(23 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
36ರ ವಯಸ್ಸಿನ ವೇಗದ ಬೌಲರ್ ಉಮೇಶ್ ಯಾದವ್(2-54) ಸತತ ಎಸೆತಗಳಲ್ಲಿ ವಿ.ವೈಶಾಕ್ ಹಾಗೂ ವಿ.ಕೌಶಿಕ್ ವಿಕೆಟ್‌ಗಳನ್ನು ಉರುಳಿಸಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ವಿದರ್ಭದ ಪರ ಯಶ್ ಠಾಕೂರ್(3-48) ಹಾಗೂ ಆದಿತ್ಯ ಸರ್ವಟೆ(3-50) ತಲಾ ಮೂರು ವಿಕೆಟ್‌ಗಳನ್ನು ಪಡೆದರು.