ರಣಜಿ ಟ್ರೋಫಿ | ಕೇವಲ ಮೂರು ರನ್ ಗಳಿಸಿ ಔಟಾದ ರೋಹಿತ್ ಶರ್ಮ

ರೋಹಿತ್ ಶರ್ಮ | PC : PTI
ಮುಂಬೈ: ಇಲ್ಲಿನ ಬಿಕೆಸಿ ಮೈದಾನದಲ್ಲಿ ನಡೆಯುತ್ತಿರುವ ಮುಂಬೈ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳ ನಡುವಿನ ರಣಜಿ ಪಂದ್ಯದಲ್ಲಿ ಮುಂಬೈ ಪರ ಆರಂಭಿಕ ಬ್ಯಾಟರ್ ಆಗಿ ಬ್ಯಾಟಿಂಗ್ ಗೆ ಇಳಿದ ರೋಹಿತ್ ಶರ್ಮ, 19 ಬಾಲ್ ಎದುರಿಸಿದರೂ ಕೇವಲ 3 ರನ್ ಗಳಿಸಿ ಔಟಾದರು. 28 ನಿಮಿಷಗಳ ಕಾಲ ಕ್ರೀಸಿನಲ್ಲಿದ್ದ ಅವರು ಜಮ್ಮು ಮತ್ತು ಕಾಶ್ಮೀರ ತಂಡದ ಬೌಲರ್ ಉಮರ್ ನಝೀರ್ ಬೌಲಿಂಗ್ ನಲ್ಲಿ ಮಿಡ್ ಆಫ್ ನಲ್ಲಿದ್ದ ಪರಾಸ್ ದೋಗ್ರಾಗೆ ಕ್ಯಾಚಿತ್ತು ನಿರ್ಗಮಿಸಿದರು.
ಇದಕ್ಕೂ ಮುನ್ನ, ಉಮರ್ ನಝೀರ್ ಬೌಲಿಂಗ್ ನಲ್ಲಿ ಮೇಡನ್ ಓವರ್ ಬಿಟ್ಟುಕೊಟ್ಟಿದ್ದ ರೋಹಿತ್ ಶರ್ಮ, ಕೊನೆಗೆ ಅವರ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಿಕೆಸಿ ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ರೋಹಿತ್ ಶರ್ಮಗೆ “ಮುಂಬೈ ಕಾ ರಾಜಾ ರೋಹಿತ್ ಶರ್ಮ"ಎಂಬ ಘೋಷಣೆಗಳನ್ನು ಕೂಗುವ ಮೂಲಕ ಸ್ವಾಗತ ನೀಡಿದರು. ಆದರೆ, ಪ್ರೇಕ್ಷಕರ ನಿರೀಕ್ಷೆಯನ್ನು ಪೂರೈಸುವಲ್ಲಿ ವಿಫಲರಾದ ರೋಹಿತ್ ಶರ್ಮ, ಎರಡಂಕಿ ಮೊತ್ತವನ್ನೂ ಗಳಿಸಲಾಗದೆ ಪೆವಿಲಿಯನ್ ಗೆ ಮರಳಿದರು.
ಮುಂಬೈ ತಂಡದ ಪರವಾಗಿ ರೋಹಿತ್ ಶರ್ಮ ಕಡೆಯದಾಗಿ 2015ರಲ್ಲಿ ಉತ್ತರ ಪ್ರದೇಶ ತಂಡದ ವಿರುದ್ಧ ಆಟವಾಡಿದ್ದರು. ಇತ್ತೀಚೆಗೆ ಮುಕ್ತಾಯಗೊಂಡಿದ್ದ ಆಸ್ಟ್ರೇಲಿಯ ಪ್ರವಾಸದಲ್ಲೂ ಕಳಪೆ ಪ್ರದರ್ಶನ ತೋರಿದ್ದ ರೋಹಿತ್ ಶರ್ಮ, ಮೂರು ಟೆಸ್ಟ್ ಪಂದ್ಯಗಳಿಂದ ಕ್ರಮವಾಗಿ 3, 9, 10, 3 ಹಾಗೂ 6 ರನ್ ಗಳನ್ನಷ್ಟೇ ಗಳಿಸಲು ಶಕ್ತರಾಗಿದ್ದರು. ಹೀಗಾಗಿ, ಸಿಡ್ನಿಯಲ್ಲಿ ನಡೆದಿದ್ದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅವರು ತಂಡದಿಂದ ಹೊರಗುಳಿದಿದ್ದರು.