ರಣಜಿ ಟ್ರೋಫಿ ಸೆಮಿಫೈನಲ್ | ಹಿಮಾಂಶು ಮಂತ್ರಿ ಶತಕ: ಬಲಿಷ್ಠ ಸ್ಥಿತಿಯಲ್ಲಿ ಮಧ್ಯಪ್ರದೇಶ
ಹಿಮಾಂಶು ಮಂತ್ರಿ | Photo: @mufaddal_vohra
ನಾಗಪುರ : ರಣಜಿ ಟ್ರೋಫಿ ಮೊದಲನೇ ಸೆಮಿಫೈನಲ್ ನ ಎರಡನೇ ದಿನವಾದ ರವಿವಾರ ಪ್ರವಾಸಿ ಮಧ್ಯಪ್ರದೇಶ ತಂಡವು ಹಿಮಾಂಶು ಮಂತ್ರಿಯ ಶತಕದ ನೆರವಿನಿಂದ ವಿದರ್ಭದ ಮೇಲೆ ಹಿಡಿತ ಸಾಧಿಸಿದೆ.
ನಾಗಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಶನ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ, ವಿದರ್ಭದ ಮೊದಲ ಇನಿಂಗ್ಸ್ ಮೊತ್ತವಾದ 170 ರನ್ ಗಳಿಗೆ ಉತ್ತರವಾಗಿ ಮಧ್ಯಪ್ರದೇಶವು ತನ್ನ ಮೊದಲ ಇನಿಂಗ್ಸ್ ನಲ್ಲಿ 252 ರನ್ ಗಳನ್ನು ಗಳಿಸಿದೆ.
ಆರಂಭಿಕ ಬ್ಯಾಟರ್ ಹಿಮಾಂಶು ಮಂತ್ರಿ 265 ಎಸೆತಗಳಲ್ಲಿ 126 ರನ್ ಗಳನ್ನು ಗಳಿಸಿದ್ದಾರೆ. ಅವರ ಇನಿಂಗ್ಸ್ ನಲ್ಲಿ 13 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಇದ್ದವು.
ಎರಡನೇ ದಿನದಾಟ ಮುಗಿದಾಗ ವಿದರ್ಭ ತನ್ನ ಎರಡನೇ ಇನಿಂಗ್ಸ್ ನಲ್ಲಿ ನಾಲ್ಕು ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿದೆ. ಅಥರ್ವ ಟೈಡೆ 2 ರನ್ ಗಳಿಸಿ ನಿರ್ಗಮಿಸಿದ್ದಾರೆ. ಧ್ರುವ ಶೋರೆ (10) ಮತ್ತು ಅಕ್ಷಯ್ ವಖಾರೆ (1) ಕ್ರೀಸ್ ನಲ್ಲಿದ್ದಾರೆ.
ರವಿವಾರ ಬೆಳಗ್ಗೆ ಮಧ್ಯಪ್ರದೇಶವು ತನ್ನ ಮೊದಲ ಇನಿಂಗ್ಸನ್ನು ಒಂದು ವಿಕೆಟ್ ನಷ್ಟಕ್ಕೆ 47 ರನ್ ಇದ್ದಲ್ಲಿಂದ ಮುಂದುವರಿಸಿತು. ಮುನ್ನಾ ದಿನ 26 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಹಿಮಾಂಶು ಮಂತ್ರಿ ತನ್ನ ಇನಿಂಗ್ಸನ್ನು ಶತಕದವರೆಗೆ ವಿಸ್ತರಿಸಿದರು. ಇದು ಈ ಋತುವಿನ ಅವರ ಮೂರನೇ ಶತಕವಾಗಿದೆ.
ಒಂದು ಹಂತದಲ್ಲಿ, ಉಮೇಶ್ ಯಾದವ್ (3-40) ಮತ್ತು ಯಶ್ ಠಾಕೂರ್ (3-51)ರ ದಾಳಿಗೆ ತತ್ತರಿಸಿದ ಮಧ್ಯಪ್ರದೇಶ ತಂಡ 93 ರನ್ ಗಳನ್ನು ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡಿತು. ಆದರೆ, ಸಾಗರ್ ಸೋಳಂಕಿ (25) ಮಂತ್ರಿಗೆ ಉತ್ತಮ ಬೆಂಬಲ ನೀಡಿದರು. ಮಂತ್ರಿ ಮತ್ತು ಸೋಳಂಕಿ ಐದನೇ ವಿಕೆಟ್ ಗೆ 42 ರನ್ ಗಳನ್ನು ಸೇರಿಸಿ ತಂಡಕ್ಕೆ ಸ್ಥಿರತೆ ಒದಗಿಸಿದರು.
ಬಳಿಕ ಮಂತ್ರಿ ಮತ್ತು ಸಾರಾಂಶ್ ಜೈನ್ (30) ಆರನೇ ವಿಕೆಟ್ ಗೆ 73 ರನ್ ಗಳನ್ನು ಸೇರಿಸಿದರು.
ಮುನ್ನಾ ದಿನ 10 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಹರ್ಷ ಗಾವ್ಳಿ 25 ರನ್ ಗಳಿಗೆ ತನ್ನ ಇನಿಂಗ್ಸ್ ಮುಕ್ತಾಯಗೊಳಿಸಿದರು.
ದಿನದಾಟದ ಮುಕ್ತಾಯದ ವೇಳೆಗೆ, ವಿದರ್ಭವು 69 ರನ್ ಗಳ ಹಿನ್ನಡೆಯಲ್ಲಿದೆ.