ರಣಜಿ ಟ್ರೋಫಿ ಸೆಮಿ ಫೈನಲ್: ಮುಂಬೈ ತಂಡಕ್ಕೆ ಶ್ರೇಯಸ್ ಅಯ್ಯರ್ ಸೇರ್ಪಡೆ
ಶ್ರೇಯಸ್ ಅಯ್ಯರ್ | Photo: PTI
ಮುಂಬೈ : ತಮಿಳುನಾಡು ವಿರುದ್ಧ ಮಾರ್ಚ್ 1ರಿಂದ ಶರದ್ ಪವಾರ್ ಕ್ರಿಕೆಟ್ ಅಕಾಡಮಿ ಮೈದಾನದಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಸೆಮಿ ಫೈನಲ್ ಪಂದ್ಯಕ್ಕೆ ಮುಂಬೈ ಕ್ರಿಕೆಟ್ ತಂಡಕ್ಕೆ ಶ್ರೇಯಸ್ ಅಯ್ಯರ್ ಸೇರ್ಪಡೆಯಾಗಿದ್ದಾರೆ.
ಕ್ವಾರ್ಟರ್ ಫೈನಲ್ ನಲ್ಲಿ ಎರಡೂ ಇನಿಂಗ್ಸ್ ನಲ್ಲಿ ಬೇಗನೆ ವಿಕೆಟ್ ಕೈಚೆಲ್ಲಿದ್ದ ಸೂರ್ಯಾಂಶ್ ಶೆಡ್ ಗೆ ಬದಲಿಗೆ ಶ್ರೇಯಸ್ 16 ಸದಸ್ಯರನ್ನು ಒಳಗೊಂಡ ತಂಡಕ್ಕೆ ಆಯ್ಕೆಯಾಗಿದ್ದಾರೆ. ಭಾರತದ ಮಾಜಿ ವೇಗದ ಬೌಲರ್ ರಾಜು ಕುಲಕರ್ಣಿ ಅಧ್ಯಕ್ಷತೆಯ ಮುಂಬೈನ ಆಯ್ಕೆ ಸಮಿತಿಯು 16 ಸದಸ್ಯರ ತಂಡವನ್ನು ಅಂತಿಮಗೊಳಿಸಿದೆ.
ಫಿಟ್ನೆಸ್ ಕಳವಳವನ್ನು ಉಲ್ಲೇಖಿಸಿ ಶ್ರೇಯಸ್ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಸ್ವತಃ ಅಲಭ್ಯರಾಗಿದ್ದರು. ಶ್ರೇಯಸ್ ಅಯ್ಯರ್ ಪ್ರಥಮ ದರ್ಜೆ ಕ್ರಿಕೆಟನ್ನು ಬದಿಗೊತ್ತಿ ಐಪಿಎಲ್ ಗೆ ತಯಾರಿ ನಡೆಸುತ್ತಿದ್ದಾರೆಂಬ ಊಹಾಪೋಹ ಹರಡಿತ್ತು.
ಈಗ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧ ಸರಣಿಯ ಮಧ್ಯದಲ್ಲೇ ಭಾರತದ ಟೆಸ್ಟ್ ತಂಡದಿಂದ ಹೊರ ಹಾಕಲ್ಪಟ್ಟ ಅಯ್ಯರ್ ಗೆ ಮತ್ತೆ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಲು ರಣಜಿ ಟ್ರೋಫಿ ನಾಕೌಟ್ ಪಂದ್ಯವು ಸುವರ್ಣಾವಕಾಶವಾಗಿದೆ.
ಶ್ರೇಯಸ್ ವೈಯಕ್ತಿಕ ಗುರಿಯನ್ನು ಸಾಧಿಸುವ ಜೊತೆಗೆ ಸೆಮಿ ಫೈನಲ್ ನಲ್ಲಿ ಮಧ್ಯಮ ಸರದಿಗೆ ಶಕ್ತಿ ತುಂಬಲಿದ್ದಾರೆ ಎಂದು ಮುಂಬೈ ತಂಡ ವಿಶ್ವಾಸದಲ್ಲಿದೆ.
ಮುಂಬೈ ರಣಜಿ ತಂಡ
ಅಜಿಂಕ್ಯ ರಹಾನೆ(ನಾಯಕ), ಪೃಥ್ವಿ ಶಾ, ಭೂಪೆನ್ ಲಾಲ್ವಾಣಿ, ಮುಶೀರ್ ಖಾನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಟಾಮೋರ್(ವಿಕೆಟ್ಕೀಪರ್),ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ಥಿ, ಅಮೋಘ ಭಟ್ಕರ್, ಪ್ರಸಾದ್ ಪವಾರ್(ವಿಕೆಟ್ ಕೀಪರ್), ಆದಿತ್ಯ ಧುಮಾಲ್, ರೋಸ್ಟನ್ ಡಯಸ್, ಧವಳ್ ಕುಲಕರ್ಣಿ.