ರಣಜಿ ಟ್ರೋಫಿ ಸೆಮಿಫೈನಲ್ | ವಿಜಯದತ್ತ ದಿಟ್ಟ ಹೆಜ್ಜೆಯಿಟ್ಟಿರುವ ವಿದರ್ಭ
ವಿದರ್ಭ | Photo: X\ BCCI
ನಾಗಪುರ : ರಣಜಿ ಟ್ರೋಫಿ ಸೆಮಿಫೈನಲ್ ನ ನಾಲ್ಕನೇ ದಿನವಾದ ಮಂಗಳವಾರ ಮಧ್ಯಪ್ರದೇಶದ ವಿರುದ್ಧ ರೋಚಕ ಗೆಲುವೊಂದನ್ನು ದಾಖಲಿಸುವ ಹಾದಿಯಲ್ಲಿ ವಿದರ್ಭ ಮುಂದುವರಿದಿದೆ.
ಪಂದ್ಯವನ್ನು ಗೆಲ್ಲಲು ದ್ವಿತೀಯ ಇನಿಂಗ್ಸ್ ನಲ್ಲಿ 321 ರನ್ ಗಳ ಗುರಿಯನ್ನು ಪಡೆದ ಮಧ್ಯಪ್ರದೇಶವು ನಾಲ್ಕನೇ ದಿನದಾಟದ ಕೊನೆಗೆ 6 ವಿಕೆಟ್ ಗಳ ನಷ್ಟಕ್ಕೆ 228 ರನ್ ಗಳಿಸಿದೆ. ಪಂದ್ಯದ ಕೊನೆಯ ದಿನವಾದ ಬುಧವಾರ ಮಧ್ಯಪ್ರದೇಶವು ಗೆಲುವಿಗೆ 93 ರನ್ ಗಳನ್ನು ಗಳಿಸಬೇಕಾಗಿದೆ.
ಆರಂಭಿಕ ಬ್ಯಾಟರ್ ಯಶ್ ದುಬೆ 94 ರನ್ ಗಳಿಸಿ ನಿರ್ಗಮಿಸಿರುವುದು ಮಧ್ಯಪ್ರದೇಶಕ್ಕೆ ದೊಡ್ಡ ಹಿನ್ನಡೆಯಾಯಿತು. ಆಗ ಪಂದ್ಯವು ಆತಿಥೇಯ ವಿದರ್ಭದತ್ತ ವಾಲಿತು. ದಿನದ ಕೊನೆಗಿಂತ ಮೊದಲಿನ ಓವರ್ನಲ್ಲಿ ಆದಿತ್ಯ ಸರ್ವಾಟೆ (2-51)ಯ ಎಸೆತವನ್ನು ದುಬೆ, ಅಮನ್ ಮೋಖಡೆಗೆ ಕ್ಯಾಚ್ ನೀಡಿದರು.
ಸಾರಾಂಶ್ ಜೈನ್ (16 ಅಜೇಯ) ಮತ್ತು ಇನ್ನಷ್ಟೇ ರನ್ ಗಳಿಸಬೇಕಾಗಿರುವ ಕುಮಾರ್ ಕಾರ್ತಿಕೇಯ ಕ್ರೀಸ್ ನಲ್ಲಿದ್ದಾರೆ.
ಒಂದು ಕಡೆಯಲ್ಲಿ ವಿಕೆಟ್ ಗಳು ಉರುಳುತ್ತಿದ್ದರೂ, ವಿದರ್ಭ ಬೌಲರ್ಗಳ ವಿರುದ್ಧ ದುಬೆ ಏಕಾಂಗಿ ಹೋರಾಟ ನೀಡಿದರು. ದೃಢ ನಿರ್ಧಾರದ ಬ್ಯಾಟಿಂಗ್ ಮೂಲಕ ಅವರು ಗುರಿಯನ್ನು ಬೆನ್ನತ್ತುವತ್ತ ದಿಟ್ಟ ಹೆಜ್ಜೆಗಳನ್ನು ಇಟ್ಟರು. ಅವರು 212 ಎಸೆತಗಳಲ್ಲಿ 94 ರನ್ ಗಳಿಸಿದರು. ಇದರಲ್ಲಿ 10 ಬೌಂಡರಿಗಳಿವೆ.
ಅವರು ಹರ್ಷ ಗಾವಳಿ ಜೊತೆಗೆ ಎರಡನೇ ವಿಕೆಟ್ ಗೆ 106 ರನ್ ಗಳ ಮಹತ್ವದ ಜೊತೆಯಾಟ ನಿಭಾಯಿಸಿದರು. ಹರ್ಷ ಗಾವಳಿ 80 ಎಸೆತಗಳಿಂದ 67 ರನ್ ಗಳನ್ನು ಸಂಪಾದಿಸಿದರು.
ಆದರೆ, ಗಾವಳಿ ನಿರ್ಗಮನದ ಬಳಿಕ ಮಧ್ಯಪ್ರದೇಶ ಸಂಕಷ್ಟಕ್ಕೆ ಸಿಲುಕಿತು. ವಿದರ್ಭದ ಬೌಲರ್ಗಳು ನಿಯಮಿತವಾಗಿ ಪ್ರಹಾರ ನೀಡಿದರು.
ಮೊದಲ ಇನಿಂಗ್ಸ್ ನಲ್ಲಿ ಶತಕ ಬಾರಿಸಿದ್ದ ಹಿಮಾಂಶು ಮಂತ್ರಿ ಎರಡನೇ ಇನಿಂಗ್ಸ್ ನಲ್ಲಿ ಕೇವಲ 8 ರನ್ ಗಳಿಸಿ ನಿರ್ಗಮಿಸಿದರು.
ಮಧ್ಯಪ್ರದೇಶದ ಮಧ್ಯಮ ಕ್ರಮಾಂಕದ ಮೂವರು ಬ್ಯಾಟರ್ಗಳಾದ ಸಾಗರ್ ಸೋಳಂಕಿ (12), ಶುಭಮ್ ಶರ್ಮ (6) ಮತ್ತು ವೆಂಕಟೇಶ್ ಅಯ್ಯರ್ (19)ರ ವೈಫಲ್ಯವು ಆ ತಂಡವನ್ನು ಹೆಚ್ಚಾಗಿ ಕಾಡಿತು.
ವಿದರ್ಭ ತಂಡದ ಬೌಲರ್ ಅಕ್ಷಯ್ ವಖಾರೆ ಆತಿಥೇಯ ತಂಡದ ಆಪತ್ಬಾಂಧವನಾದರು. ಅವರು ಈ ಮೂರು ವಿಕೆಟ್ ಗಳನ್ನು ಉರುಳಿಸಿದರು. ಆ ಮೂಲಕ ವಿದರ್ಭವನ್ನು ಸ್ಪರ್ಧೆಯ ಹಾದಿಗೆ ತಂದರು.
ಇದಕ್ಕೂ ಮೊದಲು, ವಿದರ್ಭ ತಂಡವು ಮುನ್ನಾ ದಿನದ ಮೊತ್ತವಾದ 6 ವಿಕೆಟ್ ಗಳ ನಷ್ಟಕ್ಕೆ 343 ರನ್ ಇದ್ದಲ್ಲಿಂದ ತನ್ನ ದ್ವಿತೀಯ ಇನಿಂಗ್ಸನ್ನು ಮುಂದುವರಿಸಿತು. ಮಧ್ಯಪ್ರದೇಶಕ್ಕೆ ದೊಡ್ಡ ಮೊತ್ತದ ಗುರಿಯನ್ನು ನೀಡಲು ಎಷ್ಟು ಸಾಧ್ಯವೋ ಅಷ್ಟು ರನ್ ಗಳನ್ನು ಗಳಿಸುವುದು ಅದರ ಗುರಿಯಾಗಿತ್ತು.
ಅಂತಿಮವಾಗಿ ಅದು 402 ರನ್ ಗಳಿಗೆ ತನ್ನ ದ್ವಿತೀಯ ಇನಿಂಗ್ಸನ್ನು ಮುಗಿಸಿತು. ಅದರ ಕೊನೆಯ ನಾಲ್ಕು ವಿಕೆಟ್ ಗಳಲ್ಲಿ 59 ರನ್ ಗಳು ಬಂದವು. ಆ ಮೂಲಕ ಮಧ್ಯಪ್ರದೇಶದ ಗೆಲುವಿಗೆ ಅದು 321 ರನ್ ಗಳ ಗುರಿ ನಿಗದಿಪಡಿಸಿತು.
ಮೂರನೇ ದಿನವಾದ ಸೋಮವಾರ 97 ರನ್ ಗಳಿಸಿ ಅಜೇಯವಾಗಿ ಉಳಿದಿದ್ದ ಯಶ್ ರಾಥೋಡ್ ಮಂಗಳವಾರ ಶತಕ ಬಾರಿಸಿದರು. ಅವರು 200 ಎಸೆತಗಳಲ್ಲಿ 141 ರನ್ ಗಳನ್ನು ಬಾರಿಸಿದರು. ಇದರಲ್ಲಿ 18 ಬೌಂಡರಿಗಳು ಮತ್ತು ಎರಡು ಸಿಕ್ಸರ್ಗಳಿವೆ.
ಮಧ್ಯಪ್ರದೇಶದ ಪರವಾಗಿ ಅನುಭವ್ ಅಗರ್ವಾಲ್ 92 ರನ್ ಗಳನ್ನು ನೀಡಿ 5 ವಿಕೆಟ್ ಗಳನ್ನು ಪಡೆದರು.