ರಣಜಿ ಟ್ರೋಫಿ: 12 ವರ್ಷಗಳ ನಂತರ ದೇಶೀಯ ಕ್ರಿಕೆಟ್ ನಲ್ಲಿ ಆಡಲಿರುವ ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ
ಹೊಸ ದಿಲ್ಲಿ: ಕತ್ತಿನ ಗಾಯದ ಕಾರಣಕ್ಕೆ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲು ಆರಂಭದಲ್ಲಿ ಹಿಂಜರಿಕೆ ತೋರಿದ್ದ ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, 12 ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ದಿಲ್ಲಿ ಹಾಗೂ ರೈಲ್ವೇಸ್ ತಂಡಗಳ ನಡುವೆ ನಡೆಯಲಿರುವ ರಣಜಿ ಪಂದ್ಯದಲ್ಲಿ ಆಡಲಿದ್ದಾರೆ. ಜನವರಿ 30ರಿಂದ ರೈಲ್ವೇಸ್ ವಿರುದ್ಧ ದಿಲ್ಲಿ ತಂಡವು ಗುಂಪು ಹಂತದ ಪಂದ್ಯಗಳನ್ನು ಆಡಲಿದ್ದು, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೂಡಾ ಆಡಲಿರುವುದರಿಂದ ದಿಲ್ಲಿ ತಂಡದ ಬಲ ಹೆಚ್ಚಿದಂತಾಗಿದೆ.
ಭಾರತೀಯ ತಂಡದ ಆಟಗಾರರು ದೇಶೀಯ ಕ್ರಿಕೆಟ್ ನಲ್ಲಿ ಆಡಬೇಕು ಎಂದು ಬಿಸಿಸಿಐ ಕಡ್ಡಾಯಗೊಳಿಸಿದ ನಂತರ, ವಿರಾಟ್ ಕೊಹ್ಲಿ ಆಡುತ್ತಿರುವ ಪ್ರಪ್ರಥಮ ದೇಶೀಯ ಪಂದ್ಯ ಇದಾಗಿದೆ.
ವಿರಾಟ್ ಕೊಹ್ಲಿ ಕಡೆಯದಾಗಿ ದೇಶೀಯ ಪಂದ್ಯ ಆಡಿದ್ದು 2012ರಲ್ಲಿ. ಘಾಝಿಯಾಬಾದ್ ನಲ್ಲಿ ಉತ್ತರ ಪ್ರದೇಶ ತಂಡದ ವಿರುದ್ಧ ನಡೆದಿದ್ದ ಆ ರಣಜಿ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡವು ಆರು ವಿಕೆಟ್ ಗಳ ಅಂತರದಿಂದ ದಿಲ್ಲಿ ತಂಡದೆದುರು ಗೆಲುವಿನ ನಗೆ ಬೀರಿತ್ತು. ಇದಲ್ಲದೆ, ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಎರಡೂ ಇನಿಂಗ್ಸ್ ಗಳಲ್ಲಿ ಕ್ರಮವಾಗಿ 14 ಮತ್ತು 43 ರನ್ ಮಾತ್ರ ಗಳಿಸಿದ್ದರು. ಆ ಪಂದ್ಯದಲ್ಲಿ ಭಾರತ ತಂಡದ ಹಾಲಿ ಮುಖ್ಯ ಕೋಚ್ ಗೌತಮ್ ಗಂಭೀರ್ ಹಾಗೂ ವೇಗಿ ಆಶಿಶ್ ನೆಹ್ರಾ, ಇಶಾಂತ್ ಶರ್ಮ ಕೂಡಾ ದಿಲ್ಲಿ ತಂಡದ ಪರವಾಗಿ ಆಡಿದ್ದರು.