14 ವರ್ಷಗಳ ಹಳೆಯ ಟಿ20 ದಾಖಲೆ ಮುರಿದ ರಶೀದ್ ಖಾನ್
ರಶೀದ್ ಖಾನ್ | Photo: NDTV
ಶಾರ್ಜಾ: ಅಗ್ರಮಾನ್ಯ ಲೆಗ್ ಸ್ಪಿನ್ನರ್ ರಶೀದ್ ಖಾನ್ ಐರ್ಲ್ಯಾಂಡ್ ವಿರುದ್ಧ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಇತಿಹಾಸ ನಿರ್ಮಿಸಿದರು. ಅಫ್ಘಾನಿಸ್ತಾನದ ನಾಯಕ ಟಿ20 ಕ್ರಿಕೆಟ್ ನಲ್ಲಿ ಅತ್ಯುತ್ತಮ ಬೌಲಿಂಗ್ ಸಂಘಟಿಸಿದರು.
ಈ ಮಹತ್ವದ ಸಾಧನೆಯ ಮೂಲಕ ರಶೀದ್ 14 ವರ್ಷಗಳ ಹಿಂದೆ ನವರೋಝ್ ಮಂಗಲ್ ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಇದೇ ವೇಳೆ ಅವರು 350 ಅಂತರರಾಷ್ಟ್ರೀಯ ವಿಕೆಟ್ ಗಳನ್ನು ಪಡೆದ ಅಫ್ಘಾನಿಸ್ತಾನದ ಮೊದಲ ಬೌಲರ್ ಎನಿಸಿಕೊಳ್ಳುವ ಮೂಲಕ ಮತ್ತೊಂದು ಮೈಲಿಗಲ್ಲನ್ನು ತಲುಪಿದರು.
ಮಂಗಲ್ 2010ರ ಫೆಬ್ರವರಿಯಲ್ಲಿ ವರ್ಲ್ಡ್ ಟಿ20 ಕ್ವಾಲಿಫೈಯರ್ ನ ಫೈನಲ್ ನಲ್ಲಿ ವಿಲಿಯಮ್ ಪೋರ್ಟರ್ಫೀಲ್ಡ್ ನೇತೃತ್ವದ ಐರ್ಲ್ಯಾಂಡ್ ವಿರುದ್ಧ 4 ಓವರ್ಗಳಲ್ಲಿ 23 ರನ್ ನೀಡಿ 3 ವಿಕೆಟ್ ಗಳನ್ನು ಪಡೆದಿದ್ದರು.
ರಶೀದ್ ತಮ್ಮ ಅಮೋಘ ಸ್ಪೆಲ್ ನಲ್ಲಿ 4 ಓವರ್ಗಳಲ್ಲಿ ಕೇವಲ 19 ರನ್ ನೀಡಿ ಮೂರು ವಿಕೆಟ್ ಗಳನ್ನು ಉರುಳಿಸಿದ್ದರು. ಈ ಮೂಲಕ ತನ್ನ ಅತ್ಯುತ್ತಮ ಕೌಶಲ್ಯ ಪ್ರದರ್ಶಿಸಿ, ಅಫ್ಘಾನಿಸ್ತಾನದ ಬೌಲಿಂಗ್ ವಿಭಾಗದಲ್ಲಿ ತನ್ನ ನಿರ್ಣಾಯಕ ಪಾತ್ರವನ್ನು ಪ್ರದರ್ಶಿಸಿದರು.
ರಶೀದ್ ಅವರು ಪ್ರಮುಖ ಆಟಗಾರರಾದ ಪೌಲ್ ಸ್ಟಿರ್ಲಿಂಗ್, ಕರ್ಟಿಸ್ ಕ್ಯಾಂಫರ್ ಹಾಗೂ ಗರೆತ್ ಡೆಲ್ಯಾನಿ ವಿಕೆಟ್ ಗಳನ್ನು ಪಡೆದಿದ್ದರು. ಐರ್ಲ್ಯಾಂಡ್ ತಂಡವನ್ನು ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 149 ರನ್ ಗೆ ನಿಯಂತ್ರಿಸುವಲ್ಲಿ ಮುಖ್ಯ ಕೊಡುಗೆ ನೀಡಿದ್ದರು.
ರಶೀದ್ ಅತ್ಯುತ್ತಮ ಪ್ರದರ್ಶನದ ಹೊರತಾಗಿಯೂ ಅಫ್ಘಾನಿಸ್ತಾನ ತಂಡ ಐರ್ಲ್ಯಾಂಡ್ ಎದುರು 38 ರನ್ನಿಂದ ಸೋಲುಂಡಿದೆ.
ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ನಾಯಕರ ಉತ್ತಮ ಬೌಲಿಂಗ್ ಅಂಕಿ-ಅಂಶ
ರಶೀದ್ ಖಾನ್: 2024ರಲ್ಲಿ ಶಾರ್ಜಾದಲ್ಲಿ ಐರ್ಲ್ಯಾಂಡ್ ವಿರುದ್ಧ 4-0-19-3
ನವರೋಝ್ ಮಂಗಲ್: 2010ರಲ್ಲಿ ದುಬೈನಲ್ಲಿ ಐರ್ಲ್ಯಾಂಡ್ ವಿರುದ್ಧ 4-0-23-3
ಗುಲ್ಬದಿನ್ ನೈಬ್: 2023ರಲ್ಲಿ ಹಾಂಗ್ಝೌನಲ್ಲಿ ಶ್ರೀಲಂಕಾ ವಿರುದ್ಧ 4-0-28-3
ಮುಹಮ್ಮದ್ ನಬಿ: 2013ರಲ್ಲಿ ಶಾರ್ಜಾದಲ್ಲಿ ಸ್ಕಾಟ್ಲ್ಯಾಂಡ್ ವಿರುದ್ಧ 4-0-12-2
ಮುಹಮ್ಮದ್ ನಬಿ: 2022ರಲ್ಲಿ ದುಬೈನಲ್ಲಿ ಶ್ರೀಲಂಕಾ ವಿರುದ್ಧ 4-0-14-2