2025ರ ಐಪಿಎಲ್ ಹರಾಜಿಗಿಂತ ಮೊದಲು CSK ತಂಡಕ್ಕೆ ಆರ್.ಅಶ್ವಿನ್ ವಾಪಸ್
ಆರ್.ಅಶ್ವಿನ್ | PC : NDTV
ಹೊಸದಿಲ್ಲಿ : ಐಪಿಎಲ್ ನಲ್ಲಿ 2008ರಿಂದ 2015ರ ತನಕ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದ ಭಾರತದ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ಹೊಸ ಹುದ್ದೆಯೊಂದಿಗೆ CSK ಫ್ರಾಂಚೈಸಿಗೆ ಪುನರಾಗಮನ ಮಾಡಲಿದ್ದಾರೆ.
ಪ್ರಸ್ತುತ ಅವರು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. CSKಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅಶ್ವಿನ್ CSKಯ ಉನ್ನತ ಪ್ರದರ್ಶನ ಕೇಂದ್ರದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. 2025ರ ಐಪಿಎಲ್ ಋತುವಿನ ಆರಂಭದಲ್ಲಿ ಈ ಕೇಂದ್ರವು ಸಂಪೂರ್ಣವಾಗಿ ಕಾರ್ಯಾರಂಭಿಸುವ ನಿರೀಕ್ಷೆ ಇದೆ. CSKಯ ಅಕಾಡೆಮಿಗಳಿಗೆ ಸಂಬಂಧಿಸಿ ಅಶ್ವಿನ್ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ.
ಕ್ರಿಕೆಟನ್ನು ಬೆಳೆಸುವುದು ಹಾಗೂ ಕ್ರಿಕೆಟ್ ಭ್ರಾತೃತ್ವಕ್ಕೆ ಕೊಡುಗೆ ನೀಡುವುದು ನನ್ನ ಪ್ರಾಥಮಿಕ ಗಮನ. ನನ್ನ ವೃತ್ತಿಜೀವನ ಎಲ್ಲಿಂದ ಆರಂಭವಾಯಿತು ಎಂಬ ಕುರಿತು ನನಗೆ ಸಂತೋಷವಿದೆ ಎಂದು ಅಶ್ವಿನ್ ಅವರು ಹೇಳಿದ್ದಾರೆ.
ಐಪಿಎಲ್-2025ರ ಋತುವಿಗಿಂತ ಮೊದಲು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಫ್ರಾಂಚೈಸಿಗಳು ಗರಿಷ್ಠ ತಲಾ 4 ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶವಿದೆ. ಹೀಗಾದಲ್ಲಿ ಅಶ್ವಿನ್ರನ್ನು ರಾಜಸ್ಥಾನ ಉಳಿಸಿಕೊಳ್ಳದು.
ಅಶ್ವಿನ್ CSKಯಲ್ಲಿದ್ದಾಗ ಎಂ.ಎಸ್. ಧೋನಿ ನಾಯಕತ್ವದ ತಂಡ 2010 ಹಾಗೂ 2011ರಲ್ಲಿ ಸತತವಾಗಿ ಐಪಿಎಲ್ ಪ್ರಶಸ್ತಿಗಳನ್ನು ಜಯಿಸಲು ನೆರವಾಗಿದ್ದರು. ಮುಂದಿನ 4 ವರ್ಷಗಳ ಕಾಲ ಅಶ್ವಿನ್ ಅವರು CSK ತಂಡ ಪ್ರತಿ ಬಾರಿಯೂ ಪ್ಲೇ ಆಫ್ ತಲುಪುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.