ರವೀಂದ್ರ ಜಡೇಜ 2023ರಲ್ಲಿ ಹೆಚ್ಚು ಡೋಪಿಂಗ್ ಪರೀಕ್ಷೆಗೆ ಒಳಗಾದ ಭಾರತದ ಕ್ರಿಕೆಟಿಗ
https:twitter/imjadeja
ಹೊಸದಿಲ್ಲಿ: ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜ ಈ ವರ್ಷದ ಜನವರಿ ಹಾಗೂ ಮೇ ತಿಂಗಳ ನಡುವೆ ಮೂರು ಬಾರಿ ಡೋಪ್ ಮಾದರಿ ನೀಡಿದ್ದಾರೆ. ಈ ಮೂಲಕ ಐದು ತಿಂಗಳ ಅವಧಿಯಲ್ಲಿ ಹೆಚ್ಚು ಡೋಪಿಂಗ್ ಪರೀಕ್ಷೆಗೆ ಒಳಗಾದ ಕ್ರಿಕೆಟಿಗನಾಗಿದ್ದಾರೆ ಎಂದು ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ)ಬಿಡುಗಡೆ ಮಾಡಿದ ಡಾಟಾದಲ್ಲಿ ತಿಳಿದುಬಂದಿದೆ.
ಈ ವರ್ಷದ ಮೊದಲ 5 ತಿಂಗಳಲ್ಲಿ ಡೋಪಿಂಗ್ ಪರೀಕ್ಷೆಗೆ ಒಳಗಾದ 55 ಕ್ರಿಕೆಟಿಗರಲ್ಲಿ(ಪುರುಷ ಹಾಗೂ ಮಹಿಳೆಯರು, 58 ಸ್ಯಾಂಪಲ್ಗಳು) ಅರ್ಧದಷ್ಟು ಸ್ಯಾಂಪಲ್ಗಳನ್ನು ಔಟ್ ಆಫ್ ಕಾಂಪಿಟೀಶನ್ ವೇಳೆ ತೆಗೆದುಕೊಳ್ಳಲಾಗಿದೆ ಎಂದು ನಾಡಾ ತನ್ನ ವೆಬ್ಸೈಟ್ ಲಿಸ್ಟ್ನಲ್ಲಿ ತಿಳಿಸಿದೆ.
ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಕ್ರಿಕೆಟಿಗರಿಂದ ಹೆಚ್ಚಿನ ಸಂಖ್ಯೆಯ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿದೆ. ಕ್ರಮವಾಗಿ 2021 ಹಾಗೂ 2022ರಲ್ಲಿ ನಾಡಾ ಅನುಕ್ರಮವಾಗಿ 54 ಹಾಗೂ 60 ಸ್ಯಾಂಪಲ್ಗಳನ್ನು ಸಂಗ್ರಹಿಸಿದೆ ಎಂದು ಡಾಟಾದಿಂದ ತಿಳಿದುಬಂದಿದೆ.
ಭಾರತದ ನಾಯಕ ರೋಹಿತ್ ಶರ್ಮಾ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2023ರ ಮೊದಲ 5 ತಿಂಗಳಲ್ಲಿ ಡೋಪಿಂಗ್ ಪರೀಕ್ಷೆಗೆ ಒಳಗಾಗಿಲ್ಲ. 2021 ಹಾಗೂ 2022ರಲ್ಲಿ ತಲಾ ಮೂರು ಬಾರಿ ಸ್ಯಾಂಪಲ್ಗಳನ್ನು ನೀಡಿದ್ದ ರೋಹಿತ್ ಹೆಚ್ಚು ಬಾರಿ ಪರೀಕ್ಷೆಗೆ ಒಳಗಾದ ಕ್ರಿಕೆಟಿಗ ಎನಿಸಿಕೊಂಡಿದ್ದರು ಎಂದು ಕಳೆದ 2 ವರ್ಷಗಳ ನಾಡಾ ಡಾಟಾದಿಂದ ತಿಳಿದುಬಂದಿದೆ.
ಕೊಹ್ಲಿ 2021 ಹಾಗೂ 2022ರಲ್ಲೂ ಪರೀಕ್ಷೆಗೆ ಒಳಗಾಗಿಲ್ಲ. 2022ರ ಸುಮಾರು 20 ಸ್ಯಾಂಪಲ್ಗಳನ್ನು ಮಹಿಳಾ ಕ್ರಿಕೆಟಿಗರಿಂದಲೇ ಸಂಗ್ರಹಿಸಲಾಗಿತ್ತು.