ಡಬ್ಲ್ಯುಪಿಎಲ್ ಹರಾಜಿಗೆ ಮುನ್ನ 2 ಶಿಬಿರ ಏರ್ಪಡಿಸಲು ಆರ್ಸಿಬಿ ನಿರ್ಧಾರ
PC : @IPL
ಬೆಂಗಳೂರು : ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಮೂರನೇ ಆವೃತ್ತಿಯ ಹರಾಜಿಗೆ ಮುನ್ನ ಆಟಗಾರರಿಗೆ ಎರಡು ಶಿಬಿರಗಳನ್ನು ಏರ್ಪಡಿಸಲು ತಂಡವು ಉದ್ದೇಶಿಸಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮಹಿಳಾ ತಂಡದ ಸಹಾಯಕ ಪ್ರಧಾನ ಕೋಚ್ ಮಲೋಲನ್ ರಂಗರಾಜನ್ ಹೇಳಿದ್ದಾರೆ.
ಡಬ್ಲ್ಯುಪಿಎಲ್ 2025ರ ಹರಾಜಿಗೆ ಮುನ್ನ ಆರು ವಿದೇಶಿ ಆಟಗಾರ್ತಿಯರು ಸೇರಿದಂತೆ 14 ಆಟಗಾರ್ತಿಯರನ್ನು ಉಳಿಸಿಕೊಳ್ಳುವುದಾಗಿ ಆರ್ಸಿಬಿ ಗುರುವಾರ ಪ್ರಕಟಿಸಿದೆ. 2024ರ ಚಾಂಪಿಯನ್ ತಂಡದಲ್ಲಿ ಉಳಿದುಕೊಂಡಿರುವವರ ಪಟ್ಟಿಯಲ್ಲಿ ನಾಯಕಿ ಸ್ಮೃತಿ ಮಂದಾನ, ತಾರಾ ಬ್ಯಾಟರ್ ಎಲೈಸ್ ಪೆರಿ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ಮುಖ್ಯವಾಗಿ ಕಾಣಿಸಿಕೊಂಡಿದ್ದಾರೆ.
ಡಬ್ಲ್ಯುಪಿಎಲ್ 2025ರ ಹರಾಜು ಡಿಸೆಂಬರ್ನಲ್ಲಿ ನಡೆಯುವ ನಿರೀಕ್ಷೆ ಇದೆ.
‘‘ಹರಾಜಿಗೆ ಮುನ್ನ ನಮ್ಮ ಆಟಗಾರ್ತಿಯರಿಗೆ ಎರಡು ಶಿಬಿರಗಳನ್ನು ನಾವು ಏರ್ಪಡಿಸಲಿದ್ದೇವೆ. ಅದೇ ವೇಳೆ, ನಮ್ಮ ಆಸಕ್ತಿಯ ಆಟಗಾರ್ತಿಯರ ಪಟ್ಟಿಯೊಂದನ್ನೂ ತಯಾರಿಸುತ್ತೇವೆ. ಇದರಿಂದ ಹರಾಜಿಗೆ ಮುನ್ನ ಆಟಗಾರ್ತಿಯರ ಕಿರುಪಟ್ಟಿಯೊಂದನ್ನು ತಯಾರಿಸಲು ನಮಗೆ ಅನುಕೂಲವಾಗುತ್ತದೆ. ನಾವು ಯಾರ ಮೇಲೆ ಕಣ್ಣಿಡಬೇಕು ಮತ್ತು ಬದಲಿ ಆಟಗಾರರಾಗಿ ನಮಗೆ ಯಾರು ಬೇಕು ಎನ್ನುವುದನ್ನೂ ತೀರ್ಮಾನಿಸಲು ಇದರಿಂದ ಸಾಧ್ಯವಾಗುತ್ತದೆ’’ ಎಂದು ಆರ್ಸಿಬಿ ಬಿಡುಗಡೆಗೊಳಿಸಿದ ಹೇಳಿಕೆಯೊಂದರಲ್ಲಿ ಮಲೋಲನ್ ತಿಳಿಸಿದ್ದಾರೆ.
ಡಬ್ಲ್ಯುಪಿಎಲ್ 2024ರಲ್ಲಿ ಆರ್ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಅದು ಫೈನಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿದೆ.
ಉಳಿಸಿಕೊಳ್ಳಲಾಗಿರುವ ಆಟಗಾರ್ತಿಯರು: ಆಶಾ ಶೋಭನಾ, ಡ್ಯಾನಿ ವಯಟ್, ಏಕ್ತಾ ಬಿಶ್ತ್, ಎಲೈಸ್ ಪೆರಿ, ಜಾರ್ಜಿಯಾ ವೇರ್ಹ್ಯಾಮ್, ಕನಿಕಾ ಅಹುಜ, ಕೇಟ್ ಕ್ರಾಸ್, ರೇಣುಕಾ ಸಿಂಗ್, ರಿಚಾ ಘೋಷ್, ಎಸ್. ಮೇಘನಾ, ಶ್ರೇಯಾಂಕಾ ಪಾಟೀಲ್, ಸ್ಮತಿ ಮಂದಾನ, ಸೋಫೀ ಡಿವೈನ್ ಮತ್ತು ಸೋಫೀ ಮಾಲಿನೋಸ್.
ಬಿಡುಗಡೆಗೊಳಿಸಲಾದ ಆಟಗಾರ್ತಿಯರು: ದಿಶಾ ಕಸಟ್, ಇಂದ್ರಾಣಿ ರಾಯ್, ಶ್ರದ್ಧಾ ಪೊಕಾರ್ಕರ್, ಶುಭಾ ಸತೀಶ್ ಮತ್ತು ಸಿಮ್ರಾನ್ ಬಹಾದುರ್.