ಸಚಿನ್ ತೆಂಡುಲ್ಕರ್ ರ ಐಪಿಎಲ್ ದಾಖಲೆ ಮುರಿದ ಆರ್ ಸಿ ಬಿ ನಾಯಕ ರಜತ್ ಪಾಟಿದಾರ್

ರಜತ್ ಪಾಟಿದಾರ್ | PTI
ಹೊಸದಿಲ್ಲಿ: ಮಳೆಬಾಧಿತ ಐಪಿಎಲ್ ಪಂದ್ಯದಲ್ಲಿ ಶುಕ್ರವಾರ ಪಂಜಾಬ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 5 ವಿಕೆಟ್ಗಳಿಂದ ಮಣಿಸಿದೆ. ಮಳೆಯಿಂದಾಗಿ ಪ್ರತೀ ತಂಡಗಳು 14 ಓವರ್ಗಳ ಪಂದ್ಯ ಆಡಿದ್ದವು.
ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿ ಬಿ ತಂಡವು ಟಿಮ್ ಡೇವಿಡ್ ಪ್ರತಿದಾಳಿಯ ನೆರವಿನಿಂದ 9 ವಿಕೆಟ್ಗಳ ನಷ್ಟಕ್ಕೆ 95 ರನ್ ಗಳಿಸಿತ್ತು. ಪಂಜಾಬ್ ತಂಡವು ಕೇವಲ 12.1 ಓವರ್ಗಳಲ್ಲಿ ಗುರಿ ತಲುಪಿತು.
ಆರ್ ಸಿ ಬಿ ಈ ಪಂದ್ಯವನ್ನು ಸೋತ ಹೊರತಾಗಿಯೂ ನಾಯಕ ರಜತ್ ಪಾಟಿದಾರ್ ವೈಯಕ್ತಿಕ ಮೈಲಿಗಲ್ಲು ತಲುಪಿದರು. ಐಪಿಎಲ್ ಇತಿಹಾಸದಲ್ಲಿ ವೇಗವಾಗಿ 1,000 ರನ್ ಗಳಿಸಿದ ಭಾರತದ 2ನೇ ಬ್ಯಾಟರ್ ಎನಿಸಿಕೊಂಡರು.
ಪಾಟಿದಾರ್ ಕೇವಲ 30 ಇನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದರು. ಗುಜರಾತ್ ಟೈಟಾನ್ಸ್ ತಂಡದ ಬ್ಯಾಟರ್ ಸಾಯಿ ಸುದರ್ಶನ್ ಕೇವಲ 25 ಇನಿಂಗ್ಸ್ ಗಳಲ್ಲಿ ಸಾವಿರ ರನ್ ಪೂರೈಸಿದ್ದರು. ಈ ಸಾಧನೆಯ ಹಾದಿಯಲ್ಲಿ ಪಾಟಿದಾರ್ ಅವರು ಸಚಿನ್ ತೆಂಡುಲ್ಕರ್ ಹಾಗೂ ಋತುರಾಜ್ ಗಾಯಕ್ವಾಡ್(ಇಬ್ಬರೂ 31 ಇನಿಂಗ್ಸ್) ಹಾಗೂ ತಿಲಕ್ ವರ್ಮಾ(33 ಇನಿಂಗ್ಸ್)ಅವರ ದಾಖಲೆಯನ್ನು ಮುರಿದರು.
ಗಮನಾರ್ಹ ವಿಚಾರವೆಂದರೆ ಪಾಟಿದಾರ್ ಐಪಿಎಲ್ ಇತಿಹಾಸದಲ್ಲಿ 35ಕ್ಕೂ ಅಧಿಕ ಸರಾಸರಿಯಲ್ಲಿ ಹಾಗೂ 150ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ ನಲ್ಲಿ 1,000 ರನ್ ತಲುಪಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.