ಯುಪಿ ವಾರಿಯರ್ಸ್ ಗೆ 158 ರನ್ ಗಳ ಗುರಿ ನೀಡಿದ ಆರ್ ಸಿ ಬಿ
ರಿಚಾ ಘೋಷ್ 62, ಎಸ್ ಮೇಘನಾ 53 ರನ್ | ರಾಜೇಶ್ವರಿ ಗಾಯಕ್ವಾಡ್ ಗೆ 2 ವಿಕೆಟ್
Photo : x/@wplt20
ಬೆಂಗಳೂರು : ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಮೆನ್ಸ್ ಪ್ರೀಮಿಯರ್ ಲೀಗ್ ನ ಯು ಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ರೋಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು.
ಟಾಸ್ ಗೆದ್ದ ಯುಪಿ ವಾರಿಯರ್ಸ್ ತಂಡವು ಆರ್ ಸಿ ಬಿ ಯನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಇನ್ನಿಂಗ್ಸ್ ಆರಂಭಿಸಿದ ಸೋಫಿ ಡಿವೈನ್ ಹಾಗೂ ನಾಯಕಿ ಸ್ಮೃತಿ ಮಂದಾನ ಇನ್ನಿಂಗ್ಸ್ ಆರಂಭಿಸಿದರು. ತಂಡವು 13 ರನ್ ಗಳಿಸಿದ್ದಾಗ ಸೋಫಿ ಡಿವೈನ್ ಅವರು ಯು ಪಿ ವಾರಿಯರ್ಸ್ ನ ಗ್ರೇಸ್ ಹರಿಸ್ ಅವರ ಎಸೆತದಲ್ಲಿ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು. ಬಳಿಕ ಕ್ರೀಸ್ ಗೆ ಬಂದ ಸಬ್ಬಿನೇನಿ ಮೇಘನಾ ಅವರು ಸ್ಮೃತಿ ಮಂದಾನ ಅವರಿಗೆ ಜೊತೆಯಾದರು.
ಮೇಘನಾ ಜೊತೆ ರಕ್ಷಣಾತ್ಮಕ ಆಟವಾಡುತ್ತಾ ತಂಡಕ್ಕೆ ಆಸರೆಯಾಗುತ್ತಿದ್ದ ನಾಯಕಿ ಸ್ಮೃತಿ ಮಂದಾನ 11 ಎಸೆತಗಳಲ್ಲಿ 1 ಸಿಕ್ಸರ್ 1 ಬೌಂಡರಿ ಬಾರಿಸಿ 13 ರನ್ ಗಳಿಸಿದ್ದಾಗ ಟಹ್ಲಿಯಾ ಮೆಗ್ರಾತ್ ಎಸೆತದಲ್ಲಿ ವೃಂದಾ ದಿನೇಶ್ ಗೆ ಕ್ಯಾಚಿತ್ತು ಪೆವಿಲಿಯನ್ ಹಾದಿ ಹಿಡಿದರು. ಆ ಬಳಿಕ ತಂಡಕ್ಕೆ ಆಸರೆಯಾದ ಮೇಘನಾ ಕ್ರೀಸ್ ಗೆ ಅಂಟಿಕೊಂಡು ನಿಂತರು.
ಆರ್ ಸಿ ಬಿ ಪಂದ್ಯವಾದ್ದರಿಂದ ತುಂಬಿದ್ದ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ತಮ್ಮ ಬ್ಯಾಟ್ ಮೂಲಕ ರಸದೌತಣ ನೀಡಿದರು. 44 ಎಸೆತ ಎದುರಿಸಿದ ಮೇಘನಾ 7 ಬೌಂಡರಿ 1 ಸಿಕ್ಸರ್ ನೊಂದಿಗೆ 53 ರನ್ ಬಾರಿಸಿ, ಅರ್ಧ ಶತಕ ದಾಖಲಿಸಿದರು. ತಂಡದ ವಿಕೆಟ್ ಕೀಪರ್ ರಿಚಾ ಘೋಷ್ ವೇಗದ ಆಟವಾಡಿ, ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 37 ಎಸೆತ ಎದುರಿಸಿದ ರಿಚಾ, 12 ಬೌಂಡರಿಗಳೊಂದಿಗೆ 62 ರನ್ ಗಳಿಸಿ ಅರ್ಧ ಶತಕ ದಾಖಲಿಸಿ, ಆರ್ ಸಿ ಬಿ ಅಭಿಮಾನಿಗಳ ಮನ ಗೆದ್ದರು.
ಯುಪಿ ವಾರಿಯರ್ಸ್ ಪರ ರಾಜೇಶ್ವರಿ ಗಾಯಕ್ವಾಡ್ 2 ವಿಕೆಟ್ ಪಡೆದರು. ಗ್ರೇಸ್ ಹರಿಸ್, ಟಹ್ಲಿಯಾ ಮೆಗ್ರಾತ್, ಸೋಫಿ ಎಕ್ಲೆಸ್ಟೋನ್, ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಪಡೆದರು.