ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ನಿಂದ ನಿವೃತ್ತಿಯಾಗದಿರಲು ಕಾರಣ ಹೇಳಿದ ರಿಕಿ ಪಾಂಟಿಂಗ್

ರೋಹಿತ್ ಶರ್ಮಾ , ರಿಕಿ ಪಾಂಟಿಂಗ್ | PTI
ಹೊಸದಿಲ್ಲಿ: ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡವು 2023ರಲ್ಲಿ ಸ್ವದೇಶದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಜೇಯ ಗೆಲುವಿನ ಓಟದಲ್ಲಿ ತೊಡಗಿದ್ದರೂ ಫೈನಲ್ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಸೋಲನುಭವಿಸಿ ಪ್ರಶಸ್ತಿ ವಂಚಿತವಾಗಿತ್ತು.
ಕಳೆದ ವಾರ ದುಬೈನಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಜಯಿಸಿದ ನಂತರ ರೋಹಿತ್ ಏಕದಿನ ಕ್ರಿಕೆಟ್ನಿಂದ ನಿವೃತ್ತಿಯಾಗದಿರಲು ಕಾರಣ ಇದೇ ಆಗಿರಬಹುದು ಎಂದು ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಅಭಿಪ್ರಾಯಪಟ್ಟರು.
ಮುಂದಿನ ಏಕದಿನ ವಿಶ್ವಕಪ್ ಟೂರ್ನಿಯು 2027ರಲ್ಲಿ ದಕ್ಷಿಣ ಆಫ್ರಿಕಾ, ಝಿಂಬಾಬ್ವೆ ಹಾಗೂ ನಮೀಬಿಯಾದ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.
‘‘ಭಾರತ ತಂಡವು 2023ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸೋತಿತ್ತು. ಆಗ ರೋಹಿತ್ ನಾಯಕನಾಗಿದ್ದರು. ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಪ್ರಶಸ್ತಿ ಜಯಿಸಬೇಕೆಂಬ ಬಯಕೆ ಅವರಲ್ಲಿ ಇರಬಹುದು. ಅವರು ನಿವೃತ್ತಿಯಾಗದಿರಲು ಅದುವೇ ಕಾರಣವಾಗಿರಬಹುದು. ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಅವರು ಆಡಿರುವ ರೀತಿ ನೋಡಿದರೆ ಅವರು ಇನ್ನಷ್ಟು ಸಮಯ ಆಡಲಿದ್ದಾರೆ’’ಎಂದು ಪಾಂಟಿಂಗ್ ಹೇಳಿದ್ದಾರೆ.
ದುಬೈನಲ್ಲಿ ಫೈನಲ್ ಪಂದ್ಯದಲ್ಲಿ 76 ರನ್ ಗಳಿಸಿದ್ದ ರೋಹಿತ್ ಅವರು ಶುಭಮನ್ ಗಿಲ್ ಜೊತೆಗೆ ಮೊದಲ ವಿಕೆಟ್ಗೆ 105 ರನ್ ಜೊತೆಯಾಟ ನಡೆಸಿ ಭಾರತದ ರನ್ ಚೇಸ್ಗೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು. ಅಂತಿಮವಾಗಿ ಭಾರತವು 4 ವಿಕೆಟ್ಗಳಿಂದ ಜಯಶಾಲಿಯಾಗಿತ್ತು. ಮಾ.9ರಂದು ದುಬೈ ಇಂಟರ್ನ್ಯಾಶನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 7ಕ್ಕೆ 251 ರನ್ಗೆ ನಿಯಂತ್ರಿಸಿದ್ದ ಭಾರತವು ಇನ್ನೊಂದು ಓವರ್ ಬಾಕಿ ಇರುವಾಗಲೇ ಗೆಲುವು ಪಡೆದಿತ್ತು.
ಆಸ್ಟ್ರೇಲಿಯ ವಿರುದ್ಧ ಸೆಮಿ ಫೈನಲ್ ಪಂದ್ಯ ಗೆದ್ದ ನಂತರ ರೋಹಿತ್ ಇತಿಹಾಸ ನಿರ್ಮಿಸಿದ್ದರು. ಐಸಿಸಿ ಸ್ಪರ್ಧೆಗಳಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಹಾಗೂ ಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ತಂಡವನ್ನು ಫೈನಲ್ ಗೆ ತಲುಪಿಸಿದ ಏಕೈಕ ನಾಯಕನಾಗಿ ಹೊರಹೊಮ್ಮಿದ್ದರು.
ಕಳೆದ ವರ್ಷ ವೆಸ್ಟ್ಇಂಡೀಸ್ನ ಬಾರ್ಬಡೋಸ್ನಲ್ಲಿ ಟಿ-20 ವಿಶ್ವಕಪ್ ಜಯಿಸಿದ ಬೆನ್ನಿಗೇ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್ನಿಂದ ನಿವೃತ್ತಿ ಪ್ರಕಟಿಸಿದ್ದರು. ಚಾಂಪಿಯನ್ಸ್ ಟ್ರೋಫಿ ಮುಗಿದ ತಕ್ಷಣ ಈ ಇಬ್ಬರು ಹಿರಿಯ ಆಟಗಾರರು ನಿವೃತ್ತಿಯಾಗುತ್ತಾರೆಂಬ ಊಹಾಪೋಹ ಕೇಳಿಬಂದಿಂತ್ತು.
ಆದರೆ ರೋಹಿತ್ ಅವರು ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ನಂತರ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ ಅವರು ಈ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದರು.
ನಾನು ಏಕದಿನ ಕ್ರಿಕೆಟ್ನಿಂದ ನಿವೃತ್ತಿಯಾಗುತ್ತಿಲ್ಲ. ಇಂತಹ ವದಂತಿಗಳನ್ನು ಮತ್ತೊಮ್ಮೆ ಹಬ್ಬಿಸಬೇಡಿ ಎಂದು ರೋಹಿತ್ ವಿನಂತಿಸಿಕೊಂಡಿದ್ದರು.
ಎಪ್ರಿಲ್ನಲ್ಲಿ 38ನೇ ವಯಸ್ಸಿಗೆ ಕಾಲಿಡಲಿರುವ ರೋಹಿತ್ ಅವರು ಭಾರತ ತಂಡದ ನಾಯಕತ್ವವಹಿಸಿ 4 ವರ್ಷ ಪೂರ್ಣಗೊಳ್ಳಲಿದೆ. ರೋಹಿತ್ 2021ರಲ್ಲಿ ನಾಯಕತ್ವದ ಹೊಣೆ ಹೊತ್ತಿದ್ದರು.