ಮಿಕ್ಸೆಡ್ 50 ಮೀ. ರೈಫಲ್ ಪ್ರೋನ್ ಸ್ಪರ್ಧೆ: ಮೋನಾ ಅಗರ್ವಾಲ್, ಸಿದ್ದಾರ್ಥ್ ಬಾಬು ಫೈನಲ್ ತಲುಪಲು ವಿಫಲ
ಮೋನಾ ಅಗರ್ವಾಲ್, ಸಿದ್ದಾರ್ಥ್ ಬಾಬು | PC: NDTV
ಪ್ಯಾರಿಸ್: ಪ್ಯಾರಾಲಿಂಪಿಕ್ ಗೇಮ್ಸ್ ನಲ್ಲಿ ಗುರುವಾರ ಭಾರತೀಯ ಶೂಟರ್ಗಳಾದ ಮೋನಾ ಅಗರ್ವಾಲ್ ಹಾಗೂ ಸಿದ್ದಾರ್ಥ್ ಬಾಬು ಅವರು ಮಿಕ್ಸೆಡ್ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಫೈನಲ್ ತಲುಪುವಲ್ಲಿ ವಿಫಲರಾಗಿದ್ದಾರೆ.
ಪ್ರಸಕ್ತ ಗೇಮ್ಸ್ ನಲ್ಲಿ 10 ಮೀ. ಏರ್ ರೈಫಲ್ ಸ್ಪರ್ಧಾವಳಿಯಲ್ಲಿ ಕಂಚಿನ ಪದಕ ವಿಜೇತೆ 36ರ ವಯಸ್ಸಿನ ಮೋನಾ ಒಟ್ಟು 6 ಸಿರೀಸ್ಗಳಲ್ಲಿ 610.5 ಅಂಕ ಗಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಮಿಕ್ಸೆಡ್ 10 ಮೀ. ಏರ್ ರೈಫಲ್ ಪ್ರೋನ್ ಅರ್ಹತಾ ಸುತ್ತಿನಲ್ಲಿ 28ನೇ ಸ್ಥಾನ ಪಡೆದಿದ್ದ ಸಿದ್ದಾರ್ಥ್ ಬಾಬು ಇಂದು ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಒಟ್ಟು 615.8 ಅಂಕ ಗಳಿಸುವ ಮೂಲಕ 22ನೇ ಸ್ಥಾನ ಪಡೆದರು. ಸ್ಪೇನ್ ನ ಜುಯಾನ್ ಅಂಟೊನಿಯೊ 626.9 ಅಂಕ ಗಳಿಸಿ ಅರ್ಹತಾ ಸುತ್ತಿನಲ್ಲಿ ಅಗ್ರ ಸ್ಥಾನ ಪಡೆದರು.
2021ರಲ್ಲಿ ಶೂಟಿಂಗ್ ಕ್ರೀಡೆ ಆಯ್ದುಕೊಂಡಿರುವ ಮೋನಾ ಎರಡು ಬಾರಿ ವಿಶ್ವಕಪ್ಗಳಲ್ಲಿ ಚಿನ್ನ ಗೆದ್ದಿದ್ದರು.
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಶೂಟರ್ಗಳು ಈ ತನಕ ತಲಾ ಒಂದು ಚಿನ್ನ ಹಾಗೂ ಬೆಳ್ಳಿ ಸಹಿತ 4 ಪದಕಗಳನ್ನು ಬಾಚಿಕೊಂಡಿದ್ದಾರೆ.