ರಿಂಕು ಸಿಂಗ್ಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಉಜ್ವಲ ಅವಕಾಶವಿದೆ : ಆಶಿಶ್ ನೆಹ್ರಾ

ಆಶಿಶ್ ನೆಹ್ರಾ Photo- PTI
ಮುಂಬೈ: ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡುವ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವ ಉಜ್ವಲ ಅವಕಾಶ ಮಧ್ಯಮ ಕ್ರಮಾಂಕದ ಬ್ಯಾಟರ್ ರಿಂಕು ಸಿಂಗ್ಗೆ ಇದೆ ಎಂದು ಭಾರತೀಯ ತಂಡದ ಮಾಜಿ ವೇಗಿ ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಆಡುವ 11ರ ಬಳಗದಲ್ಲಿ ಫಿನಿಶರ್ ಪಾತ್ರವನ್ನು ಪಡೆಯಲು ಅವರು ಭಾರೀ ಪೈಪೋಟಿಯನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಹಾಲಿ ನಡೆಯುತ್ತಿರುವ ಆಸ್ಟ್ರೇಲಿಯ ವಿರುದ್ಧದ ಟ್ವೆಂಟಿ20 ಸರಣಿಯಲ್ಲಿ, ರಿಂಕು ಇನಿಂಗ್ಸ್ ಕೊನೆಯಲ್ಲಿ ಫಿನಿಶರ್ ಆಗಿ ತಂಡದಲ್ಲಿ ತನ್ನ ಸ್ಥಾನವನ್ನು ಬಲಪಡಿಸುತ್ತಿದ್ದಾರೆ. ಇನಿಂಗ್ಸ್ ಕೊನೆಯಲ್ಲಿ ಅವರು ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ವಿಶಾಖಪಟ್ಟಣಂಲ್ಲಿ ನಡೆದ ಪಂದ್ಯದಲ್ಲಿ 14 ಎಸೆತಗಳಲ್ಲಿ ಅವರು ಗಳಿಸಿದ 22 ರನ್ಗಳು 209 ರನ್ಗಳ ಗುರಿಯನ್ನು ತಲುಪುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು.
ತಿರುವನಂತಪುರಂನಲ್ಲಿ ಕೇವಲ 9 ಎಸೆತಗಳಲ್ಲಿ 31 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದಿದ್ದರು ಮತ್ತು ರಾಯ್ಪುರದಲ್ಲಿ 29 ಎಸೆತಗಳಲ್ಲಿ 46 ರನ್ ಮಾಡಿದ್ದರು.
ರಿಂಕು ತನ್ನ ದೊಡ್ಡ ಹೊಡೆತಗಳ ಇನಿಂಗ್ಸನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿದ್ದಾರೆ. ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರವಾಗಿ ಮತ್ತು ದೇಶಿ ಕ್ರಿಕೆಟ್ನಲ್ಲಿ ಉತ್ತರಪ್ರದೇಶದ ಪರವಾಗಿ ಅವರು ತನ್ನ ಈ ಕೌಶಲವನ್ನು ಕಾರ್ಯರೂಪಕ್ಕೆ ಈಗಾಗಲೇ ತಂದಿದ್ದಾರೆ.
“ಭಾರತದ ಟಿ20 ತಂಡದಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿ ರಿಂಕು ಸಿಂಗ್ ಇದ್ದಾರೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ವಿಶ್ವಕಪ್ ಇನ್ನೂ ದೂರವಿದೆ ಮತ್ತು ಅವರು ಸ್ಪರ್ಧಿಸುತ್ತಿರುವ ಸ್ಥಾನಕ್ಕೆ ಹಲವಾರು ಸ್ಪರ್ಧಿಗಳಿದ್ದಾರೆ. ವಿಕೆಟ್ಕೀಪರ್ ಬ್ಯಾಟರ್ ಜಿತೇಶ್ ಶರ್ಮ ಮತ್ತು ತಿಲಕ್ ವರ್ಮ ಕೂಡ ಈ ಸ್ಪರ್ಧೆಯಲ್ಲಿದ್ದಾರೆ’’ ಎಂದು ನೆಹ್ರಾ ಹೇಳಿದರು.