ಲಕ್ನೊ ಸೂಪರ್ ಜಯಂಟ್ಸ್ ನೂತನ ನಾಯಕನಾಗಿ ರಿಷಭ್ ಪಂತ್ ನೇಮಕ

ರಿಷಭ್ ಪಂತ್ | PC : X
ಹೊಸದಿಲ್ಲಿ: ಮುಂಬರುವ 2025ರ ಆವೃತ್ತಿಯ ಐಪಿಎಲ್ಗೆ ರಿಷಭ್ ಪಂತ್ರನ್ನು ಲಕ್ನೊ ಸೂಪರ್ ಜಯಂಟ್ಸ್ ತಂಡದ ನೂತನ ನಾಯಕನಾಗಿ ನೇಮಿಸಲಾಗಿದೆ ಎಂದು ತಂಡದ ಮಾಲಕ ಸಂಜೀವ್ ಗೊಯೆಂಕಾ ಸೋಮವಾರ ಘೋಷಿಸಿದ್ದಾರೆ.
ಕಳೆದ ವರ್ಷ ಸೌದಿ ಅರೇಬಿಯದ ಜಿದ್ದಾದಲ್ಲಿ ನಡೆದಿದ್ದ ಐಪಿಎಲ್ ಮೆಗಾ ಹರಾಜಿನಲ್ಲಿ 27 ಕೋಟಿ ರೂ.ಗೆ ಲಕ್ನೊ ತಂಡದ ತೆಕ್ಕೆಗೆ ಸೇರಿದ್ದ ಪಂತ್ ಅವರು ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು.
ಪಂತ್ ಅವರು ಲಕ್ನೊ ತಂಡದ ನಾಯಕತ್ವ ವಹಿಸಿರುವ 4ನೇ ಆಟಗಾರನಾಗಿದ್ದಾರೆ. ಈ ಹಿಂದೆ ಕೆ.ಎಲ್.ರಾಹುಲ್, ನಿಕೊಲಸ್ ಪೂರನ್ ಹಾಗೂ ಕೃನಾಲ್ ಪಾಂಡ್ಯ ತಂಡದ ನಾಯಕತ್ವ ವಹಿಸಿದ್ದರು.
ಲಕ್ನೊ ತಂಡ ತನ್ನ ಮೊದಲೆರಡು ಐಪಿಎಲ್ ಋತುಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿತ್ತು. 2022 ಹಾಗೂ 2023ರ ಆವೃತ್ತಿಗಳ ಟೂರ್ನಿಯಲ್ಲಿ ಪ್ಲೇ ಆಫ್ಗೆ ಲಗ್ಗೆ ಇಟ್ಟಿತ್ತು. ಆದರೆ 2024ರ ಋತುವಿನಲ್ಲಿ ಕಳಪೆ ರನ್ ರೇಟ್ನಿಂದಾಗಿ ಅಂಕಪಟ್ಟಿಯಲ್ಲಿ 7ನೇ ಸ್ಥಾನ ಪಡೆದು ಪ್ಲೇ-ಆಫ್ ರೇಸ್ನಿಂದ ಹೊರಗುಳಿದಿತ್ತು.
ಪಂತ್ ಅವರು ಐಪಿಎಲ್ನಲ್ಲಿ 2ನೇ ಬಾರಿ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಪರ 2021ರಿಂದ 2024ರ ತನಕ ನಾಯಕನಾಗಿದ್ದರು. 2022ರ ಡಿಸೆಂಬರ್ನಲ್ಲಿ ಕಾರು ಅಪಘಾತದಲ್ಲಿ ತೀವ್ರ ಗಾಯಗೊಂಡ ಕಾರಣ 2023ರ ಋತುವಿನಲ್ಲಿ ಆಡಿರಲಿಲ್ಲ. ಪಂತ್ ಅವರು ಡೆಲ್ಲಿ ತಂಡವನ್ನು 9 ವರ್ಷ ಪ್ರತಿನಿಧಿಸಿದ್ದರು.