ಐಪಿಎಲ್: ರಿಷಭ್ ಪಂತ್ ವಿಕೆಟ್ ಕೀಪಿಂಗ್ ಮಾಡುವುದು ಅನುಮಾನ ಎಂದ ಪಾಂಟಿಂಗ್
Photo : Sportzpics
ಹೊಸದಿಲ್ಲಿ: ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಎಲ್ಲ ಪಂದ್ಯಗಳನ್ನು ಆಡುವುದಾಗಿ ರಿಷಭ್ ಪಂತ್ ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದರೂ ಕೂಡ ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಅವರು ಪಂತ್ ಡೆಲ್ಲಿ ನಾಯಕತ್ವವಹಿಸುವ ಬಗ್ಗೆ ಹಾಗೂ ವಿಕೆಟ್ಕೀಪಿಂಗ್ ನಡೆಸುವ ಕುರಿತಂತೆ ಅನುಮಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಪಂತ್ ಭೀಕರ ಕಾರು ಅಪಘಾತದಿಂದ ಆಗಿರುವ ಗಂಭೀರ ಗಾಯಗಳಿಂದ ಈಗಲೂ ಪೂರ್ಣ ಚೇತರಿಸಿಕೊಂಡಿಲ್ಲ.
2022ರ ಡಿಸೆಂಬರ್ನಲ್ಲಿ ನಡೆದಿದ್ದ ಕಾರು ಅಪಘಾತದ ನಂತರ ಪಂತ್ ಅವರು ಯಾವುದೇ ಕ್ರಿಕೆಟ್ ಪಂದ್ಯವನ್ನು ಆಡಿಲ್ಲ.
ರಿಷಭ್ ಪಂತ್ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಆಡುವ ವಿಶ್ವಾಸದಲ್ಲಿದ್ದಾರೆ. ನೀವು ಎಲ್ಲ ಸಾಮಾಜಿಕ ಮಾಧ್ಯಮದಲ್ಲಿ ಪಂತ್ ಚೆನ್ನಾಗಿ ಓಡುತ್ತಿರುವುದನ್ನು ನೋಡಿದ್ದೀರಿ. ಆದರೆ ನಾವು ಐಪಿಎಲ್ನ ಮೊದಲ ಪಂದ್ಯದಿಂದ ಕೇವಲ ಆರು ವಾರಗಳ ದೂರದಲ್ಲಿದ್ದೇವೆ. ಆದ್ದರಿಂದ ನಾವು ಈ ವರ್ಷ ಅವರಿಂದ ವಿಕೆಟ್ ಕೀಪಿಂಗ್ ಮಾಡಿಸುವ ಬಗ್ಗೆ ಖಚಿತ ನಿರ್ಧಾರಕ್ಕೆ ಬಂದಿಲ್ಲ ಎಂದು ಬ್ಯಾಟಿಂಗ್ ದಂತಕತೆ ಪಾಂಟಿಂಗ್ ಹೇಳಿದ್ದಾರೆ.
ನಾನು ಈಗ ಪಂತ್ ಬಳಿ ಮಾತನಾಡಿದರೆ, ನಾನು ಪ್ರತಿ ಪಂದ್ಯ ಆಡುತ್ತೇನೆ, ನಾನು ಪ್ರತಿ ಪಂದ್ಯದ ವಿಕೆಟ್ ಕೀಪಿಂಗ್ ನಡೆಸುತ್ತೇನೆ, ನಾನು 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವೆ ಎಂದು ನನ್ನಲ್ಲಿ ಹೇಳುವುದು ನಿಶ್ಚಿತ. ಅವರೊಬ್ಬ ಕ್ರಿಯಾಶೀಲ ಆಟಗಾರ, ಅವರು ನಿಸ್ಸಂಶಯವಾಗಿ ನಮ್ಮ ನಾಯಕ, ಕಳೆದ ವರ್ಷ ನಾವು ಅವರ ಸೇವೆಯಿಂದ ವಂಚಿತರಾಗಿದ್ದೇವೆ ಎಂದು ಪಾಂಟಿಂಗ್ ಹೇಳಿದ್ದಾರೆ.