ಜಯ್ ಶಾರಿಂದ ತೆರವಾದ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ರೋಹನ್ ಜೇಟ್ಲಿ ಹೆಸರು ಮುಂಚೂಣಿಯಲ್ಲಿ!
ರೋಹನ್ ಜೇಟ್ಲಿ , ಜಯ್ ಶಾ | PC : X
ಹೊಸದಿಲ್ಲಿ: ಜಯ್ ಶಾ ಅವರು ನವೆಂಬರ್ ನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿಯಲಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ರೋಹನ್ ಜೇಟ್ಲಿ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.
ಇದೇ ಆಗಸ್ಟ್ ನಲ್ಲಿ ಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದರು. ಡಿಸೆಂಬರ್ 1ರಿಂದ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಜಯ್ ಶಾ ICC ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದಾರೆ. ಇದಲ್ಲದೆ ಜಯ್ ಶಾ ಈ ಪ್ರತಿಷ್ಠಿತ ಹುದ್ದೆ ಅಲಂಕರಿಸಿದ ಐದನೇ ಭಾರತೀಯರಾಗಿದ್ದಾರೆ. ಜಗ್ಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಈ ಮೊದಲು ಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.
ಜಯ್ ಶಾ ಅವರಿಂದ ತೆರವಾದ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರೋಹನ್ ಜೇಟ್ಲಿ ಮತ್ತು ಅನಿಲ್ ಪಟೇಲ್ ಪೈಪೋಟಿ ನಡೆಸುತ್ತಿದ್ದಾರೆ ಎಂದು INDIA TODAY ವರದಿ ತಿಳಿಸಿದೆ. ರೋಹನ್ ಜೇಟ್ಲಿ ಪ್ರಸ್ತುತ ಡಿಡಿಸಿಎ(DDCA) ಅಧ್ಯಕ್ಷರಾಗಿದ್ದರೆ, ಪಟೇಲ್ ಗುಜರಾತ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ.
ಬಿಸಿಸಿಐನ ಮುಂದಿನ ಕಾರ್ಯದರ್ಶಿ ನೇಮಕದ ಬಗ್ಗೆ ಚರ್ಚಿಸಲು ಯಾವುದೇ ಅಧಿಕೃತ ಸಭೆಯನ್ನು ಕರೆಯಲಾಗಿಲ್ಲ. ಅನಿಲ್ ಪಟೇಲ್ ಮತ್ತು ರೋಹನ್ ಜೇಟ್ಲಿ ಇಬ್ಬರೂ ಪೈಪೋಟಿಯನ್ನು ನಡೆಸುತ್ತಿದ್ದರೂ, ರೋಹನ್ ಜೇಟ್ಲಿ ಹೆಸರು ಹೆಚ್ಚು ಮುಂಚೂಣಿಯಲ್ಲಿದೆ ಎಂದು ಹೇಳಲಾಗಿದೆ.