ಪಂದ್ಯಾವಳಿಯ ತನ್ನ ಮೊದಲ ಅರ್ಧ ಶತಕ ಬಾರಿಸಿದ ರೋಹಿತ್

ರೋಹಿತ್ ಶರ್ಮಾ | PC : PTI
ದುಬೈ : ನ್ಯೂಝಿಲ್ಯಾಂಡ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ರವಿವಾರ ಭಾರತ ತಂಡದ ನಾಯಕ ಹಾಗೂ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅರ್ಧ ಶತಕ ಬಾರಿಸಿ ತಂಡದ ಮೊತ್ತಕ್ಕೆ ಮಹತ್ವದ ಕೊಡುಗೆ ನೀಡಿದರು.
ಅವರು ರಚಿನ್ ರವೀಂದ್ರ ಎಸೆತದಲ್ಲಿ ಸ್ಟಂಪ್ಡ್ ಆಗಿ ನಿರ್ಗಮಿಸುವ ಮೊದಲು 83 ಎಸೆತಗಳಲ್ಲಿ 76 ರನ್ ಗಳನ್ನು ಗಳಿಸಿದರು. ಇದರಲ್ಲಿ 7 ಬೌಂಡರಿಗಳು ಮತ್ತು 3 ಸಿಕ್ಸರ್ ಗಳಿವೆ. ಇದಕ್ಕೂ ಮೊದಲು ಅವರು ಕೇವಲ 41 ಎಸೆತಗಳಲ್ಲಿ ಅರ್ಧ ಶತಕದ ಗಡಿಯನ್ನು ತಲುಪಿದರು. ಇದು ಈ ಪಂದ್ಯಾವಳಿಯಲ್ಲಿ ಅವರ ಮೊದಲ ಅರ್ಧ ಶತಕವಾಗಿದೆ.
ಅಮೋಘ ಫಾರ್ಮ್ನಲ್ಲಿದ್ದ ರೋಹಿತ್, ತನ್ನ ಆಕರ್ಷಕ ಹೊಡೆತಗಳ ಮೂಲಕ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರಿಗೆ ರಸದೌತಣ ಬಡಿಸಿದರು. ವಿಜಯಕ್ಕೆ 252 ರನ್ ಗಳ ಗುರಿಯನ್ನು ಪಡೆದ ಭಾರತಕ್ಕೆ ಅವರು ಮಿಂಚಿನ ಆರಂಭವನ್ನು ನೀಡಿದರು.
ಅವರು ಶುಭಮನ್ ಗಿಲ್ ಜೊತೆಗೆ ಮೊದಲನೇ ವಿಕೆಟ್ಗೆ 105 ರನ್ ಗಳ ಭಾಗೀದಾರಿಕೆ ನಿಭಾಯಿಸಿದರು. ಇದು ಈ ಪಂದ್ಯಾವಳಿಯ ಅತ್ಯಧಿತ ಆರಂಭಿಕ ಭಾಗೀದಾರಿಕೆಯಾಗಿದೆ. ಆ ಮೂಲಕ ರೋಹಿತ್ ಮತ್ತು ಗಿಲ್ ಭಾರತದ ರನ್ ಬೆಂಬತ್ತುವಿಕೆಗೆ ಸುಭದ್ರ ಅಡಿಪಾಯ ಹಾಕಿದರು.
ತೀರಾ ಅವಸರದಲ್ಲಿದ್ದಂತೆ ಕಂಡುಬಂದ ರೋಹಿತ್ ಕೈಲ್ ಜೇಮೀಸನ್ ಹಾಕಿದ ಇನಿಂಗ್ಸ್ನ ಎರಡನೇ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿದರು.
ಅದೇ ವೇಳೆ, ರೋಹಿತ್ ಈ ಇನಿಂಗ್ಸ್ ನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಏಕದಿನ 1,000 ರನ್ ಗಳನ್ನು ಪೂರ್ತಿಗೊಳಿಸಿದರು.